ಜಿಲ್ಲೆ

ಶಿವಲಿಂಗೇಗೌಡರಿಗೆ ಮಂತ್ರಿ ಸ್ಥಾನ ಸಿಗಲಿದೆ:ಸಚಿವ ಕೆ.ಎನ್. ರಾಜಣ್ಣ ವಿಶ್ವಾಸ

ಹಾಸನ: ಇನ್ನು ಎರಡು ಮೂರು ದಿನಗಳಲ್ಲಿ ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋಗಲಿದ್ದು, ಲೋಕಸಭೆ ಅಭ್ಯರ್ಥಿ, ನಿಗಮ ಮಂಡಳಿ ಬಗ್ಗೆ ಚರ್ಚೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಸಚಿವರ ಬದಲಾವಣೆ ವೇಳೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸಚಿವರಾಗುತ್ತಾರೆ ಎಂದು ಭವಿಷ್ಯ ನುಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆ ತಿಂಗಳು 4, 5ನೇ ತಾರೀಖು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ಹೋಗುತ್ತಿದ್ದಾರೆ. ಲೋಕಸಭಾ ಅಭ್ಯರ್ಥಿ, ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಕಾರ್ಯಕರ್ತರಿಗೂ ನಿಗಮ ಮಂಡಳಿ ಸ್ಥಾನ ಕೊಡಬೇಕು. ಅವರಿಂದಲೇ ತಾನೇ ನಾವೆಲ್ಲಾ ಗೆದ್ದಿರೋದು. ಕಾರ್ಯಕರ್ತರು ಇರುವುದರಿಂದಲೇ ನಾವೆಲ್ಲಾ ಶಾಸಕರಾಗಿ ಇರುವುದು. ಕಾರ್ಯಕರ್ತರು, ಶಾಸಕರು ಇಬ್ಬರಿಗೂ ಸ್ಥಾನ ಕೊಟ್ಟು ಸಮತೋಲನ ಕಾಪಾಡುವ ಬಗ್ಗೆ ಪಕ್ಷ ಮತ್ತು ಅಧ್ಯಕ್ಷರು ನಿರ್ಣಯ ಮಾಡುತ್ತಾರೆ ಎಂದರು.
ನಂದಗೋಡನಹಳ್ಳಿ ಮರಗಳ ಕಡಿದ ಪ್ರಕರಣದ ವಿಚಾರವಾಗಿ ಮಾತನಾಡಿ, ಘಟನೆ ಬಗ್ಗೆ ಈಗಾಗಲೇ ಕಾನೂನು ರೀತಿ ಕ್ರಮ ಆಗಿದೆ. ಕಾಡುಗಳ್ಳರಿಗೆ ಪ್ರೋತ್ಸಾಹ ಕೊಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಿದೆ. ಪ್ರತಾಪ್ ಸಿಂಹ ಅವರ ತಮ್ಮ ಕೂಡ ಸಿಕ್ಕಿಹಾಕಿಕೊಂಡಿದ್ದಾರೆ. ತಪ್ಪು ಯಾರೇ ಮಾಡಿದರೂ ಅದು ತಪ್ಪೇ. ಕಾಂಗ್ರೆಸ್‌ನವರೇ ಮಾಡಿರಲಿ ಅಥವಾ ಇನ್ನೊಂದು ಪಕ್ಷದವರು ಮಾಡಿರಲಿ. ಕಾನೂನು ಎಲ್ಲರಿಗೂ ಒಂದೇ. ಪ್ರತಾಪ್ ಸಿಂಹ ಸುಮ್ಮನೆ ಮಾತನಾಡುವುದನ್ನು ಬಿಟ್ಟು, ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿ. ಕೋರ್ಟ್ ಕೊಡುವ ಅಂತಿಮ ನಿರ್ಣಯಕ್ಕೆ ನಾವು ತಲೆ ಬಾಗುತ್ತೇವೆ ಎಂದು ಹೇಳಿದರು.
ರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದ ವಿಚಾರವಾಗಿ ಮಾತನಾಡಿ, ಬಿಜೆಪಿಯವರಲ್ಲಿ ಯಾರನ್ನು ಕರಿಯಬೇಕು, ಕರಿಯಬಾರದು ಎಂಬ ಅಜೆಂಡಾ ಇರುತ್ತೆ. ಬಿಜೆಪಿ ಅಜೆಂಡಾನಾ ನಾವು ಯಾಕೆ ಪ್ರಶ್ನೆ ಮಾಡಲು ಹೋಗಬೇಕು? ಅಲ್ಲಿಗೆ ಹೋಗಿ ಮಾಡಿದ್ರೆ ಮಾತ್ರ ರಾಮನ ದರ್ಶನ, ಆಶೀರ್ವಾದಾನಾ! ನಮ್ಮೂರಲ್ಲಿ ಇರುವ ರಾಮನ ದರ್ಶನ ಮಾಡಿದರೆ ನಮಗೆ ಆಶೀರ್ವಾದ ಮಾಡುವುದಿಲ್ಲವಾ? ದೇವರು ಸರ್ವಾಂತರ್ಯಾಮಿ. ಎಲ್ಲರಲ್ಲೂ, ಎಲ್ಲೆಡೆಯೂ ದೇವರು ಇದ್ದಾನೆ.
ಮನಸ್ಸಿನ ನೆಮ್ಮದಿಗೆ ದೇವಸ್ಥಾಕ್ಕೆ ಹೋಗುತ್ತೇವೆ. ಅಲ್ಲಿಗೆ ಹೋದ ತಕ್ಷಣ ಶ್ರೀರಾಮನ ಆಶೀರ್ವಾದ ಸಿಕ್ಕಿಬಿಡುತ್ತದಾ? ಇಲ್ಲಿರುವ ಶ್ರೀರಾಮನ ದರ್ಶನ ಮಾಡಿದರೆ ಆಶೀರ್ವಾದ ಸಿಗುವುದಿಲ್ಲವಾ? ಅವರವರ ನಂಬಿಕೆಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ಅದರಲ್ಲಿ ತಪ್ಪು-ಸರಿ ವ್ಯಾಖ್ಯಾನ ನಾವು ಮಾಡಲ್ಲ. ಸಿಎಂ ಆಹ್ವಾನಿಸದೆ ಇರುವುದು ಅವರ ಸಣ್ಣತನ ಅನ್ನಬೇಕೊ, ದೊಡ್ಡತನ ಅನ್ನಬೇಕೋ ನೀವೇ ಹೇಳಿ ಎಂದು ಮಾರ್ಮಿಕವಾಗಿ ನುಡಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಬಿ. ಶಿವರಾಂ, ಶ್ರೇಯಸ್ ಪಟೇಲ್ ಇತರರು ಉಪಸ್ಥಿತರಿದ್ದರು.