ಜಿಲ್ಲೆ

ಶಿವರಾತ್ರಿ ಹಬ್ಬಕ್ಕೆ ಶಿವಭಕ್ತರು ಸಜ್ಜು

ಕಿಕ್ಕೇರಿ: ಹೋಬಳಿಯಾದ್ಯಂತ ಶಿವಭಕ್ತರು ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.


ಪಟ್ಟಣದ ಬ್ರಹ್ಮೇಶ್ವರ ದೇಗುಲದಲ್ಲಿ ಶನಿವಾರ ಬೆಳಗ್ಗೆ ಅರ್ಚಕ ಆದಿತ್ಯ ಭಾರದ್ವಾಜ್ ನೇತೃತ್ವದಲ್ಲಿ ಶಿವಲಿಂಗಕ್ಕೆ ಬೆಳಗ್ಗೆ ಪಂಚಾಮೃತ, ರುದ್ರಾಭಿಷೇಕ, ಸಂಜೆ ವಿಶೇಷ ಪೂಜೆ ನಡೆಯಲಿದೆ.


ಶರಣರ ಗ್ರಾಮ ಸಾಸಲುವಿನ ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯದಲ್ಲಿ ಬಿಲ್ವಾರ್ಚನೆ ಮತ್ತಿತರ ಪೂಜಾ ಕೈಂಕರ್ಯ, ರಾತ್ರಿ ಡಾ. ಮಳವಳ್ಳಿ ಮಹದೇವಸ್ವಾಮಿ ಅವರ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇಗುಲ, ಮಂದಗೆರೆಯ ಅಂಕನಾಥೇಶ್ವರ, ಗದ್ದೆಹೊಸೂರು ಜೋಡಿ ಬಸವೇಶ್ವರ, ಮಾದಾಪುರದ ರಾಮೇಶ್ವರ, ಮಹಾಲಿಂಗೇಶ್ವರ, ಅಂಕನಹಳ್ಳಿಯ ಮಲ್ಲೇಶ್ವರ, ಐಕನಹಳ್ಳಿಯ ಬಸವೇಶ್ವರ, ಊಗಿನಹಳ್ಳಿಯ ಈಶ್ವರ ದೇಗುಲ ಮತ್ತಿತರ ಗ್ರಾಮಗಳಲ್ಲಿ ಪೂಜೆ, ಜಾಗರಣೆ, ಯುವಕರಿಂದ ಹಗಲು ರಾತ್ರಿ ವಾಲಿಬಾಲ್, ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಎಲ್ಲೆಡೆ ಶಿವಭಕ್ತರು ಪೂಜಾ ಸಾಮಗ್ರಿ ಖರೀದಿಸಲು ಮಗ್ನರಾಗಿದ್ದರು.