ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಯಾತ್ರಾಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳ ಸೌಲಭ್ಯಕ್ಕೆ ಅಗತ್ಯ ಸಿದ್ದತೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವ ಸಂಬಂಧ ನಡೆದ ಪೂರ್ವಸಿದ್ದತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಲೆಮಹದೇಶ್ವರ ಕ್ಷೇತ್ರಕ್ಕೆ ನಾಡಿನ ನಾನಾ ಭಾಗಗಳಲ್ಲದೇ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತಾದಿಗಳು ಜಾತ್ರೆಗೆ ಆಗಮಿಸಲಿದ್ದಾರೆ. ಭಕ್ತಾಧಿಗಳಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವಾಸ್ತವ್ಯ, ದಾಸೋಹ, ದೇವರ ದರ್ಶನಕ್ಕೆ ಅಗತ್ಯ ಸೌಕರ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಕಲ್ಪಿಸಬೇಕು. ಹೀಗಾಗಿ ಎಲ್ಲ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ಇರುವುದರಿಂದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ವಸ್ತುಗಳನ್ನು, ಇತರೆ ತ್ಯಾಜ್ಯಗಳನ್ನು ಕೊಂಡೊಯ್ಯದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಜಾತ್ರಾ ಸಂದರ್ಭದಲ್ಲಿ ನೆರಳಿನ ವ್ಯವಸ್ಥೆ ಇರಬೇಕು. ಶೌಚಾಲಯ, ಸ್ನಾನದ ವ್ಯವಸ್ಥೆಗಳು ಸಮರ್ಪಕವಾಗಿ ಇರಬೇಕು. ಕ್ಷೇತ್ರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಹೆಚ್ಚುವರಿ ವೈದ್ಯರು, ಸಿಬ್ಬಂದಿ ನಿಯೋಜಿಸಿ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಪಾದಯಾತ್ರಿಗಳು ಬರುವ ಹಿನ್ನೆಲೆಯಲ್ಲಿ ಕೌದಳ್ಳಿ ಆರೋಗ್ಯ ಕೇಂದ್ರದಲ್ಲಿಯೂ ಪೂರ್ಣ ಅವಧಿಯಲ್ಲಿ ವೈದ್ಯಕೀಯ ಸೇವೆ ಲಭ್ಯವಾಗಬೇಕು. ಪಾದಯಾತ್ರೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ನೇರವಾಗಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಜಾತ್ರಾ ಅವಧಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಸ್ಸುಗಳು ಕಾರ್ಯಾಚರಣೆ ಮಾಡಬೇಕು. ನಿಗಮದ ಅಧಿಕಾರಿಗಳನ್ನು ಕ್ಷೇತ್ರಕ್ಕೆ ನಿಯೋಜಿಸಿ ಜನರ ಅಗತ್ಯಕ್ಕೆ ತಕ್ಕಂತೆ ಬಸ್ಸುಗಳನ್ನು ಮುಂಚಿತವಾಗಿಯೇ ಹಾಕುವ ವ್ಯವಸ್ಥೆಯಾಗಬೇಕು. ಎಲ್ಲಿಯೇ ಆಗಲಿ ಬಸ್ಸುಗಳಿಗೆ ಯಾವುದೇ ಕೊರತೆಯಾಗದಿರಲಿ ಎಂದು ಹೇಳಿದರು.
ಸಭೆಯಲ್ಲಿ ಸಾಲೂರು ಮಠದ ಡಾ.ಶಾಂತಮಲ್ಲಿಕಾರ್ಜುನಸ್ವಾಮಿ, ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಗಂಗನತಿಮ್ಮಯ್ಯ, ಭಾಗ್ಯಮ್ಮ, ಮಹದೇವಪ್ಪ.ಬಿ, ಮರಿಸ್ವಾಮಿ, ಆರ್.ಎಸ್.ಕುಮಾರ ವಿಜಯ, ದೇವಾಲಯದ ಅರ್ಚಕ ಕೆ.ವಿ.ಮಾದೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅಧಿಕಾರಿ ಪರಮೇಶ್ವರ್ ಹಾಗೂ ಇತರರು ಹಾಜರಿದ್ದರು.
ೆ.25 ರಿಂದ ಶಿವರಾತ್ರಿ ಜಾತ್ರಾಮಹೋತ್ಸವ:
ಮಹಾಶಿವರಾತ್ರಿ ಜಾತ್ರೆ ೆ.25 ರಿಂದ ಆರಂಭವಾಗಲಿದ್ದು ಮಾ.1 ರವರೆಗೆ ನಡೆಯಲಿದೆ. ಯುಗಾದಿ ಜಾತ್ರಾ ಮಹೋತ್ಸವ ಮಾ.27 ರಿಂದ 30 ರವರೆಗೆ ಜರುಗಲಿದೆ. ಜಾತ್ರಾ ಅವಧಿಯಲ್ಲಿ ಭಕ್ತಾಧಿಗಳಿಗೆ ವಿಶೇಷ ದಾಸೋಹ ಇರಲಿದ್ದು, ಬೆಳಿಗ್ಗೆ 7 ರಿಂದ ಮಧ್ಯರಾತ್ರಿ 12 ಗಂಟೆಯವರೆಗೂ ನಿರಂತರವಾಗಿ ನಡೆಯಲಿದೆ. ಭಕ್ತಾಧಿಗಳ ಮೂಲ ಸೌಕರ್ಯಕ್ಕಾಗಿ ಎಲ್ಲ ವ್ಯವಸ್ಥೆಗಳಿಗೆ ಕ್ರಮವಹಿಸಲಾಗಿದೆ. ಕ್ಷೇತ್ರದಲ್ಲಿ ಭಕ್ತಾಧಿಗಳಿಗೆ, ಗಣ್ಯರು ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡುವ ಕಾರ್ಯ, ಸಿಬ್ಬಂದಿ ನಿಯೋಜನೆ, ವಿಶೇಷ ಪೂಜಾ ಕೈಂಕರ್ಯಗಳ ಬಗ್ಗೆ ಎಲ್.ಇ.ಡಿ ಮೂಲಕ ವೀಕ್ಷಣೆಗೆ ಅವಕಾಶ, ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆ ಕುರಿತು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಮಾಹಿತಿ ನೀಡಿದರು.
ಸೂಕ್ತ ಬಂದೋಬಸ್ತ್:
ಶಿವರಾತ್ರಿ ಜಾತ್ರೆಗೆ ಅಗತ್ಯ ಪೊಲೀಸ್ ಬಂದೋ ಬಸ್ತ್ ಮಾಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದರು. ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಇಬ್ಬರು ಡಿವೈಎಸ್‌ಪಿ, 9 ಇನ್ಸ್‌ಪೆಕ್ಟರ್, 32 ಸಬ್‌ಇನ್ಸ್‌ಪೆಕ್ಟರ್, 67 ಸಹಾಯಕ ಸಬ್‌ಇನ್ಸ್ ಪೆಕ್ಟರ್, 421 ಕಾನ್ಸ್ ಟೇಬಲ್, 98 ಮಹಿಳಾ ಪೊಲೀಸರು, 401 ಗೃಹ ರಕ್ಷಕರು, ಡಿಆರ್ 4 ತುಕಡಿ, ಕೆಎಸ್‌ಆರ್‌ಪಿ 1 ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಹೆಚ್ಚು ಸಂಖ್ಯೆಯಲ್ಲಿ ಭಕ್ತಾಧಿಗಳು ಬರಲಿರುವುದರಿಂದ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷಿಸಬೇಕು. ಪಾದಯಾತ್ರೆಯಲ್ಲಿ ಸಹ ಸಾಕಷ್ಟು ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುವುದರಿಂದ ಮಾರ್ಗ ಮಧ್ಯೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
-ಎಂ.ಆರ್.ಮಂಜುನಾಥ್, ಶಾಸಕ, ಹನೂರು