ಪಾವಗಡ: ತಾಲೂಕಿನ ಕಸಬಾ ಹೋಬಳಿಯ ದೊಮ್ಮತಮರಿ ಗ್ರಾಮದ ಪೆಟ್ರೋಲ್ ಬಂಕ್ ಸಮೀಪ ಬೈಕ್ ಮತ್ತು ಗೂಡ್ಸ್ ಆಟೋ ಮಧ್ಯೆ ಬುಧವಾರ ತಡರಾತ್ರಿ ಅಪಘಾತ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಆಂಧ್ರ ಮೂಲದ ರೆಡ್ಡಿಪಲ್ಲಿ ಗ್ರಾಮದ ಚರಣ್(18) ಸ್ಥಳದಲ್ಲೇ ಮೃತಪಟ್ಟರೆ, ತಿರುಮಲೇಶ್ (22) ಆಂಧ್ರದ ಆಸ್ಪತ್ರಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಭರತ್ (20) ಗಂಭೀರ ಗಾಯಗೊಂಡಿದ್ದು, ಹಿಂದೂಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿ ಲೇಪಾಕ್ಷಿಗೆ ಶಿವರಾತ್ರಿಯ ಜಾಗರಣೆಗೆಂದು ಆಂಧ್ರದ ರೆಡ್ಡಿ ಪಲ್ಲಿಯಿಂದ ಬೈಕ್ನಲ್ಲಿ ಮೂವರು ಸ್ನೇಹಿತರು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಬಳಿ ಮೃತ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಪಾವಗಡ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಪಿಐ ಸುರೇಶ್ ಸ್ಥಳ ಪರಿಶೀಲಿಸಿದರು.