ಅಥಣಿ: ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಅಂಗವಾಗಿ ಸೋಮವಾರದಿಂದ ಆರಂಭವಾದ ಬಸವ ಮಹಾಪುರಾಣ ಕಾರ್ಯಕ್ರಮ ಉದ್ಘಾಟನೆ ಅಂಗವಾಗಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಮುರುಘೇಂದ್ರ ಶಿವಯೋಗಿಗಳ ಜನ್ಮಸ್ಥಳ ನದಿ ಇಂಗಳಗಾಂವನಿಂದ ಭಕ್ತರು ಬಸವ ಬುತ್ತಿ ತರುವ ಜತೆಗೆ ಮುರುಘೇಂದ್ರ ಶಿವಯೋಗಿಗಳ, ಬಸವೇಶ್ವರ ಭಾವಚಿತ್ರಗಳ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಮುರುೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ತಾಲೂಕಿನ ಭಕ್ತರ ಹದಯವೈಶಾಲ್ಯತೆಯ ಪ್ರತೀಕವಾಗಿದೆ. ಅಪ್ಪ ಮುರುಘೇಂದ್ರ ಶಿವಯೋಗಿಗಳು ಪ್ರತಿ ಮನೆ, ಮನಸ್ಸುಗಳಲ್ಲಿದ್ದಾರೆ. ಹೀಗಾಗಿ ಭಕ್ತರ ಭಕ್ತಿ ಅಪಾರವಾಗಿದೆ. ಈ ನಿಮಿತ್ತ ಒಂದು ತಿಂಗಳ ಕಾಲ ವಿಶ್ವಗುರು ಬಸವಣ್ಣನವರ ಕುರಿತು ಬಸವ ಪುರಾಣ ಆಯೋಜಿಸಲಾಗಿದೆ ಎಂದರು.
ನದಿ ಇಂಗಳಗಾಂವ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮುರುಘೇಂದ್ರ ಶಿವಯೋಗಿಗಳ ಜನ್ಮ ಸ್ಥಳವಾಗಿರುವ ನದಿ ಇಂಗಳಗಾಂವನಿಂದ ಭಕ್ತರು ಈ ಶತಮಾನೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಸೇವೆ ಸಮರ್ಪಿಸಿದ್ದಾರೆ. ಇದು ನಮ್ಮೆಲ್ಲರ ಭಾಗ್ಯವಾಗಿದೆ. ಭಕ್ತರೆಲ್ಲರೂ ಸಹಾಯ, ಸಹಕಾರ ನೀಡಿರುವುದು ಶ್ಲಾಘನೀಯ. ಈ ಬಾಂಧವ್ಯ, ಭಕ್ತಿ ಸದಾ ಹೀಗೆ ಇರಲಿ ಎಂದರು.
ಭಕ್ತರು, ಸುಮಂಗಲೆಯರು ಬಸವ ಬುತ್ತಿಯನ್ನು ತಲೆಯ ಮೇಲೆ ಹೊತ್ತು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾಪೀಠದ ಶಾಲಾ ಆವರಣದವರೆಗೆ ಮೆರವಣಿಗೆ ಸಾಗಿತು. ಹಲ್ಯಾಳದ ಗುರುಸಿದ್ದ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಸಿದ್ದಬಸವ ಕಬೀರ ಸ್ವಾಮೀಜಿ, ವೀರೇಶ್ವರ ದೇವರು, ಸಿದ್ದಲಿಂಗ ದೇವರು, ಮಲ್ಲಿಕಾರ್ಜುನ ದೇವರು, ಆನಂದ ದೇವರು, ಬಸವರಾಜ ದೇವರು, ಮಹಾದೇವ ಮಹಾರಾಜರು, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಚಿದಾನಂದ ಸವದಿ, ಗಜಾನನ ಮಂಗಸೂಳಿ, ಡಾ. ಎಂ.ಜಿ. ಹಂಜಿ, ಸದಾಶಿವ ಪಾಟೀಲ, ಧರೆಪ್ಪ ಠಕ್ಕಣವರ, ರಮೇಶ ಸಿಂದಗಿ, ಪ್ರಕಾಶ ಪಾಟೀಲ, ಶಿವರುದ್ರ ಗೂಳಪ್ಪನವರ, ಶ್ರೀಶೈಲ ನಾಯಿಕ ಇತರರು ಇದ್ದರು.