ಜಿಲ್ಲೆ

ಶಿವಯೋಗಿ ಸಿದ್ದರಾಮೇಶ್ವರ ದೇವರ 61ನೇ ವರ್ಷದ ರಥೋತ್ಸವ

ದಾವಣಗೆರೆ: ಶಿವಯೋಗಿ ಸಿದ್ದರಾಮೇಶ್ವರ ದೇವರ 61ನೇ ವರ್ಷದ ರಥೋತ್ಸವ ಹಾಗೂ ಲಿಂ. ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಸ್ಮರಣೋತ್ಸವ ಅಂಗವಾಗಿ ಭಾವಚಿತ್ರ ಮರವಣಿಗೆ ನಗರದಲ್ಲಿ ಆ.21ರಂದು ನೆರವೇರಲಿದೆ.

ನಗರದ ವೆಂಕಾಭೋವಿ ಕಾಲನಿಯಿಂದ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವ ಆರಂಭವಾಗಲಿದ್ದು, ಸಚಿವ ಶಿವರಾಜ ಎಸ್. ತಂಗಡಗಿ, ಭೋವಿ ಸಮಾಜದ ಶಾಸಕರು ಹಾಗೂ ಜಿಲ್ಲೆಯ ಎಲ್ಲ ಶಾಸಕರು ಭಾಗಿಯಾಗಲಿದ್ದಾರೆ ಎಂದು ಸಮಾಜದ ಮುಖಂಡ ಡಿ.ಬಸವರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಗಿನೆಲೆಯ ನಿರಂಜನಾನಂದ ಶ್ರೀಗಳು, ಹರಿಹರದ ವಚನಾನಂದ ಸ್ವಾಮೀಜಿ, ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಹೊಸದುರ್ಗದ ಶಾಂತವೀರ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಹೊಸದುರ್ಗದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಹಂಪಿಯ ದಯಾನಂದಪುರಿ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.

ಕಳೆದ 60 ವರ್ಷದಿಂದ ರಥೋತ್ಸವ ನಿರಂತರವಾಗಿ ನಡೆಯುತ್ತಿದ್ದು, ಇದು ಐತಿಹಾಸಿಕ ಹಿನ್ನೆಲೆ ಹೊಂದಿದೆ. ರಾಜ್ಯದ ವಿವಿಧೆಡೆಗಳಿಂದ ಭಕ್ತರು ಭಾಗವಹಿಸುವರು. ಚಂಡೆ, ಡೊಳ್ಳು ಕುಣಿತ, ಯಕ್ಷಗಾನ ಜಗ್ಗಲಿಗೆ, ಗೊಂಬೆ ಕುಣಿತ ಮೊದಲಾದ ಜಾನಪದ ಕಲಾತಂಡಗಳು ಭಾಗಿಯಾಗಲಿವೆ

ಆ.20ರ ರಾತ್ರಿ 10ರಿಂದ ಬೆಳಗಿನವರೆಗೂ ಮಹಾ ವಚನಭಜನೆ ನಡೆಯಲಿದೆ. 21ರಂದು ಮಧ್ಯಾಹ್ನ ದೇವಸ್ಥಾನ ಆವರಣದಲ್ಲಿ ಮಹಾದಾಸೋಹ ನಡೆಯಲಿದೆ ಎಂದು ತಿಳಿಸಿದರು.

ಶಿವಯೋಗಿ ಸಿದ್ದರಾಮೇಶ್ವರರು ಸಹಸ್ರಾರು ವಚನಗಳನ್ನು ರಚಿಸಿದ್ದಾರೆ. ಅವುಗಳ ಸಂಶೋಧನೆಗಾಗಿ ವಿಶ್ವವಿದ್ಯಾನಿಲಯಗಳಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ರಚಿಸಬೇಕೆಂದು ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರಾದ ಎಚ್. ಜಯಣ್ಣ, ಜಿ.ಎಸ್.ಮಂಜಪ್ಪ, ಎಚ್.ಬಸವರಾಜ್, ಎಚ್.ಎಸ್. ಗಣೇಶ್ ಕುಮಾರ್, ವೈ. ದಶರಥ, ವಿ.ಗೋಪಾಲ್, ಎಸ್. ಈಶ್ವರ್ ಇತರರಿದ್ದರು.