ನೆಲಮಂಗಲ: ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷ ಎಂಬಾತನನ್ನು ಜಿಹಾದಿಗಳು ಹತ್ಯೆ ಮಾಡಿದ್ದನ್ನು ಖಂಡಿಸಿ ಕೆಲ ಹಿಂದುಪರ ಸಂಘಟನೆ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸದಾಶಿವನಗರದ ಎಸ್.ಎಲ್.ಆರ್. ಸಮುದಾಯ ಭವನದ ಬಳಿ ಸೋಮವಾರ ಸಂಜೆ ಸಮಾವೇಶಗೊಂಡ ಹಿಂದು ಜಾಗರಣಾ ವೇದಿಕೆ, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು, ಶಿವಮೊಗ್ಗದಲ್ಲಿ ಹಿಂದು ಯುವಕನನ್ನು ಹತ್ಯೆ ಮಾಡಿದ ಜಿಹಾದಿಗಳನ್ನು ಬಂಧಿಸಿ, ತಕ್ಕ ಶಾಸ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ರಾ.ಹೆದ್ದಾರಿ 48ರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮಾಂತರ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಎಂ.ಎನ್.ರಾಮ್ ಮಾತನಾಡಿ, ಶಿವಮೊಗ್ಗದಲ್ಲಿ ಹಿಂದು ಯುವಕ ಹರ್ಷನ ಮೇಲೆ ಜಿಹಾದಿ ಮನಸ್ಥಿಯ ಕೆಲವರು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ದೂರಿದರು.
ಹಿಂದುಗಳೆಲ್ಲ ಒಂದಾಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹಿಂದು ಜಾಗಣಾ ವೇದಿಕೆ ಅಧ್ಯಕ್ಷ ಹೇಮಂತ್‌ಕುಮಾರ್ ಮಾತನಾಡಿ, ಫೆ.20ರಂದು ನಡೆದ ಕೃತ್ಯಕ್ಕೆ ದೇಶದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಹಿಂದುಗಳಾದ ನಾವೆಲ್ಲ ಒಂದು ಎಂಬ ಭಾವನೆ ಬೆಳೆಸಿಕೊಂಡು ಜಾಗೃತರಾಗಬೇಕು ಎಂದರು.
ಭಾರತದಲ್ಲಿ ಇದ್ದುಕೊಂಡು ಎಲ್ಲ ಅನುಕೂಲ ಪಡೆದು ಹಿಂದುಗಳ ಕೊಲೆ ಮತ್ತು ಅತ್ಯಾಚಾರದಂತಹ ದುಷ್ಕೃತ್ಯ ಎಸಗುತ್ತಿರುವುದು ಹೇಯ ಕೃತ್ಯ. ಇದಕ್ಕೆ ಕಡಿವಾಣ ಬೀಳಬೇಕು. ರಾಜ್ಯ ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷ ಸೌಮ್ಯಾ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ವಿಜಯ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅರಣ್‌ರಾಜ್, ಕಾರ್ಯದರ್ಶಿ ವಿನೋದ್, ಮುಖಂಡರಾದ ಮುನಿರಾಜು, ಶಿವಕುಮಾರ್, ರಾಜಣ್ಣಪ್ರಕಾಶ್, ಶೀಲಾ ಮತ್ತಿತರರು ಇದ್ದರು.