ಜಿಲ್ಲೆ

ಶಿವಮೊಗ್ಗದಲ್ಲಿ ಕಾರು ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಲೈನ್ ಮ್ಯಾನ್ ಸಾವು; ಮತ್ತಿಬ್ಬರು ಗಂಭೀರ

ಶಿವಮೊಗ್ಗ: ನಗರದ ಮಹಾವೀರ ವೃತ್ತದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಕಾರು ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಲೈನ್ ಮ್ಯಾನ್ ಮೃತಪಟ್ಟು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಎಂ ಪುರಂನ ನಾಗರಾಜ್(೩೫) ಮೃತ ಲೈನ್ ಮ್ಯಾನ್. ಕೆಇಬಿ ಕಚೇರಿಯಿಂದ ಒಂದೇ ಬೈಕ್ ನಲ್ಲಿ‌ ಮೂವರು ತೆರಳುತ್ತಿದ್ದ ವೇಳೆ ಡಿವಿಎಸ್ ಸರ್ಕಲ್ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಬೆಂಗಳೂರಿನಿಂದ ಬಂದ ಸ್ನೇಹಿತರನ್ನ ನಾಗರಾಜ್ ತನ್ನ ಬೈಕ್ ನಲ್ಲಿ ರೈಲ್ವೆ ನಿಲ್ದಾಣದಿಂದ ಕೆ ಆರ್ ಪುರಂನಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗುವಾಗ ಮಹಾವೀತ ವೃತ್ತದ ಬಳಿ ಕಾರು ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಹರೀಶ್ ಮತ್ತು ರವಿ ಎಂದು ಗುರುತಿಸಲಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ಮಹಾವೀರ ವೃತ್ತದಲ್ಲಿದ್ದ ಪೊಲೀಸ್ ಚೌಕಿ ಮೇಲೆ ನುಗ್ಗಿ ಪಲ್ಟಿಯಾಗಿದೆ. ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪಲ್ಟಿಯಾಗಿದ್ದ ಕಾರು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.