ಜಿಲ್ಲೆ

ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಹಂದಿ ಅಣ್ಣಿ ಹಂತಕರು

ಶಿವಮೊಗ್ಗ: ರೌಡಿಶೀಟರ್ ಹಂದಿ ಅಣ್ಣಿಯನ್ನು ಹತ್ಯೆ ಆರೋಪಿಗಳ ಪೊಲೀಸ್ ಕಸ್ಟಡಿ ಬುಧವಾರಕ್ಕೆ ಅಂತ್ಯಗೊಂಡಿತು. ಎಂಟು ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರಿಸಲಾಯಿತು.

ಏಳು ದಿನಗಳ ವಿಚಾರಣೆ ಪೂರ್ಣಗೊಳಿಸಿ ಎಲ್ಲ ಆರೋಪಿಗಳನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು ಬುಧವಾರ ಬೆಳಗ್ಗೆಯೇ ನಗರದ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಿ ಪಡಿಸಿದರು. ಈ ಬಗ್ಗೆ ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು.

ಜು.14ರಂದು ಹಾಡಹಗಲೇ ಇನ್ನೋವಾ ಕಾರಿನಲ್ಲಿ ಬಂದ ಕಾಡಾ ಕಾರ್ತಿಕ್, ನಿತಿನ್, ಮದನ್ ರಾಯ್, ಮಧು, ಆಂಜನೇಯ, ಫಾರೂಕ್, ಚಂದನ್, ಮತ್ತು ಮಧುಸೂದನ್ ನಡು ರಸ್ತೆಯಲ್ಲಿ ಹಂದಿ ಅಣ್ಣಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಪರಾರಿಯಾದ ತಂಡ ಜು.19ರಂದು ತಡರಾತ್ರಿ ಚಿಕ್ಕಮಗಳೂರಿನ ಎಸ್ಪಿ ಕಚೇರಿಯಲ್ಲಿ ಶರಣಾಗಿತ್ತು. ಶರಣಾದ ಆರೋಪಿಗಳನ್ನು ಚಿಕ್ಕಮಗಳೂರಿನ ನ್ಯಾಯಾಲಯದ ಮೂಲಕ ಜು.20ರಂದು ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

ಹಸ್ತಾಂತರಿಸಿದ 24 ಗಂಟೆಗಳಲ್ಲಿ ಶಿವಮೊಗ್ಗ ಪೊಲೀಸರು ಕೋರ್ಟ್‌ಗೆ ಹಾಜರಿಪಡಿಸಿ 7 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಬುಧವಾರ ಪೊಲೀಸ್ ಕಸ್ಟಡಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.