ಶ್ರೀಶೈಲಂ: ಪಂಡಿತ ಪಾಮರರಾದಿಯಾಗಿ ಎಲ್ಲರನ್ನೂ ಮತ್ತು ಎಲ್ಲವನ್ನೂ ಸಮನಾಗಿ ಕಾಣುವ ಶಿವನನ್ನು ಆರಾಧಿಸಲು ಎಲ್ಲರಿಗೂ ಅವಕಾಶವಿದೆ. ಶಿವನ ಆರಾಧನೆಗೆ ಜಾತಿಭೇದವಿಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಮಹಾಶಿವರಾತ್ರಿ ಹಾಗೂ ಜಗದ್ಗುರು ಪಂಡಿತಾರಾಧ್ಯರ ಜಯಂತಿ ಮಹೋತ್ಸವ ನಿಮಿತ್ತ ಶ್ರೀಶೈಲದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಶಿವಾಗಮದಲ್ಲಿ ಶಿವನು ‘ಸಮಾ ಭವಂತಿ ಮೇ ಸರ್ವೇ’ ನನಗೆ ಎಲ್ಲರೂ ಸಮಾನರು ಎಂದು ಹೇಳುವ ಮೂಲಕ ತನ್ನ ಸಮದಷ್ಟಿಯ ಬಗ್ಗೆ ತಿಳಿಸಿದ್ದಾನೆ. ಅಂತೆಯೇ ಅವನನ್ನು ಚಾಂಡಾಲರಿಂದ ಪಂಡಿತರವರೆಗೆ, ಬೇಡನಿಂದ ರಾಜನವರೆಗೆ ಎಲ್ಲರೂ ಪೂಜಿಸಿ ಅವನ ಕಪೆಗೆ ಪಾತ್ರರಾಗಬಹುದಾಗಿದೆ. ಜನ್ಮದಿಂದ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಯಾರೇ ಆಗಿರಲಿ ಅವನ ಹದಯದಲ್ಲಿ ಶಿವಭಕ್ತಿ ಮೊಳಕೆಯೊಡೆದರೆ ಅವನು ಶಿವನಂತೆಯೇ ಗೌರವನೀಯನಾಗುತ್ತಾನೆ. ಭೂಮಿಯಲ್ಲಿ ಜನ್ಮ ತಾಳಿದ ಪ್ರತಿಯೊಬ್ಬರಿಗೂ ಶಿವ ಸಾಕ್ಷಾತ್ಕಾರ ಮಾಡಿಕೊಳ್ಳುವ ಅಧಿಕಾರವಿದೆ. ಆದರೆ, ಅದಕ್ಕೆ ಅಗತ್ಯವಿರುವ ಸದ್ಭಾವ, ಸದ್ವಿಚಾರ ಮತ್ತು ಸದಾಚಾರಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು.
ವೀರಶೈವ ಲಿಂಗಾಯತ ಧರ್ಮದ ಸಂಸ್ಥಾಪಕ ಆಚಾರ್ಯರಲ್ಲಿ ಒಬ್ಬರಾದ ಜಗದ್ಗುರು ಪಂಡಿತಾರಾಧ್ಯರು ಶಿವರಾತ್ರಿಯ ದಿನದಂದೆ ಶ್ರೀಶೈಲದ ಮಲ್ಲಿಕಾರ್ಜುನ ಜ್ಯೋತಿಲಿರ್ಂಗದಿಂದ ಪ್ರಾದುರ್ಭವಿಸಿ ದೇವಸ್ಥಾನದ ಆವರಣದಲ್ಲಿ ಜ್ಯೋತಿರ್ಲಿಂಗದಿಂದ ನೈಋತ್ಯ ದಿಕ್ಕಿನಲ್ಲಿ ಸಮಾನತೆಯನ್ನು ಸಾರುವ ಸೂರ್ಯಸಿಂಹಾಸನ ಮಹಾಪೀಠವನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು. ಹಿರೇಜೇವರ್ಗಿ ಶ್ರೀ, ಕ್ಯಾಸನೂರ ಶ್ರೀ, ಕೂಡಲದ ಶ್ರೀ, ಅಂಕುಶದೊಡ್ಡಿಯ ಶ್ರೀ, ದೇವಸ್ಥಾನದ ಅರ್ಚಕರು, ಪೀಠದ ಮುಖ್ಯ ವ್ಯವಸ್ಥಾಪಕ ಎಂ.ಬಿ. ಮಂಜುನಾಥ ಸ್ವಾಮಿ ಇತರರು ಉಪಸ್ಥಿತರಿದ್ದರು.