ಗಜೇಂದ್ರಗಡ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಶಿವಕುಮಾರ ಮಹಾಸ್ವಾಮೀಜಿಗಳ ಭಕ್ತವೃಂದದಿಂದ ಹಮ್ಮಿಕೊಂಡಿದ್ದ ಡಾ. ಶಿವಕುಮಾರ ಮಹಾಸ್ವಾಮೀಜಿಗಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮಲ್ಲು ಶಾಸ್ತ್ರೀ, ಚಂದ್ರು ಕುಷ್ಟಗಿ, ಜಗದೀಶ ಸಂಕನೂರ, ಬಾಷು ಹವಾಲ್ದಾರ ಇದ್ದರು 
ಜಿಲ್ಲೆ

ಶಿವಕುಮಾರ ಶ್ರೀಗಳ ಬದುಕು ತ್ಯಾಗಮಯ

ಗಜೇಂದ್ರಗಡ: ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಬದುಕು ಸೇವೆ, ಕಾಯಕ, ದಾಸೋಹ, ಶಿವಯೋಗ, ತಪಸ್ಸು ಎಲ್ಲರಿಗೂ ತಿಳಿದಿದೆ. ಸೇವೆಯಲ್ಲಿ ಅವರು ತಮ್ಮನ್ನು ತಾವು ಸಮರ್ಪಣಿ ಮಾಡಿಕೊಂಡಿದ್ದರು. ಪರಮಪೂಜ್ಯರ ಜೀವನ ಸೇವೆಗೆ ಮೀಸಲಾಗಿತ್ತು. ಅವರ ಬದುಕು ತ್ಯಾಗಮಯವಾಗಿತ್ತು ಎಂದು ಸಮಾಜ ಸೇವಕ ಪ್ರವೀಣ ಹಿರೇಮಠ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಶಿವಕುಮಾರ ಸ್ವಾಮಿಗಳ ಭಕ್ತವೃಂದದಿಂದ ಹಮ್ಮಿಕೊಂಡಿದ್ದ ಡಾ. ಶ್ರೀಶಿವಕುಮಾರ ಮಹಾಸ್ವಾಮೀಜಿಗಳ ಜನ್ಮದಿನೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಗಳು ಎಂದೂ ಹಾಲು ಸೇವಿಸುತ್ತಿರಲಿಲ್ಲ. ಅವರಿಗೆ ಅನಾರೋಗ್ಯವಿದ್ದಾಗ ಒಂದು ಲೋಟ ಹಾಲು ಕೊಟ್ಟರೆ, ಏನಪ್ಪಾ ನನಗೆ ಒಂದು ಲೋಟ ಹಾಲು ಕೊಟ್ಟಿದ್ದೀಯ? ಇದನ್ನೇ ಹೆಪ್ಪು ಹಾಕಿದ್ದರೆ ನಾಲ್ಕು ಮಕ್ಕಳು ಊಟ ಮಾಡಲು ಮಜ್ಜಿಗೆ ಆಗುತ್ತಿತ್ತು ಎನ್ನುತ್ತಿದ್ದರು. 89 ವರ್ಷ ಸನ್ಯಾಸ ಜೀವನವನ್ನು ನಡೆಸಿದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ತುಮಕೂರಿನ ಸಿದ್ಧಗಂಗಾ ಮಠವನ್ನು ಎಲ್ಲ ರೀತಿಯಲ್ಲೂ ಅಭಿವೃದ್ಧಿಗೊಳಿಸಿದ್ದಾರೆ. ಅವರು ನಮ್ಮ ನಡುವೆಯೇ ಇದ್ದಾರೆ. ಅವರ ಆಶೀರ್ವಾದವೂ ನಮ್ಮೆಲ್ಲರ ಮೇಲಿರುತ್ತದೆ. ಶ್ರೀಗಳು ತಮಗಾಗಿ ಏನನ್ನೂ ಬಯಸಿದವರಲ್ಲ ಎಂದು ತಿಳಿಸಿದರು.

ಶಾಂತಯ್ಯ ಶಾಂತಗೇರಿಮಠ, ಮುರ್ತಜಾ ಡಾಲಾಯತ್, ಮಲ್ಲು ಶಾಸ್ತ್ರೀ, ಜಗದೀಶ ಸಂಕನೂರ, ಬಾಷು ಹವಾಲ್ದಾರ, ನಾರಾಯಣ ಗೌಡ್ರ, ಈಶಪ್ಪ ಜತ್ತಿ, ಮೋಹನ ತಟ್ಟಿ, ಚಂದ್ರ ಕುಷ್ಟಗಿ, ಉಮೇಶ ಗೌಡ್ರ, ದಾದು ಹಣಗಿ, ಪ್ರಕಾಶ ಬಾಗಮಾರ, ಎಸ್.ಕೆ. ಚನ್ನಿ, ಉಮೇಶ ಮೆಣಸಗಿ, ಮಂಜುನಾಥ ಬಡಗೇರ, ಇತರರಿದ್ದರು.