ಸೋಮವಾರಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಶ್ರೀ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಸದಾಶಿವ ಸ್ವಾಮೀಜಿ ಇದ್ದರು. 
ಜಿಲ್ಲೆ

ಶಿವಕುಮಾರ ಶ್ರೀಗಳ ಆಸೆಯಂತೆ ದಾಸೋಹ ಮುಂದುವರಿಕೆ

ಸೋಮವಾರಪೇಟೆ: ತುಮಕೂರಿನ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜೀವನ ಸೇವೆಗೆ ಮುಡಿಪಾಗಿತ್ತು ಎಂದು ಶ್ರೀ ಮಠದ ಮಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಕಾಯಕಯೋಗಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಸಮಿತಿ ವತಿಯಿಂದ ಪಟ್ಟಣದ ಆನೆಕೆರೆ ಸಮೀಪ ನಿರ್ಮಿಸಿರುವ ಶಿವಕುಮಾರ ಸ್ವಾಮೀಜಿ ಪ್ರಯಾಣಿಕರ ತಂಗುದಾಣ ಉದ್ಘಾಟಿಸಿದ ಬಳಿಕ ಸಾಕ್ಷಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೊದಲು ಊಟ ನಂತರ ಜ್ಞಾನ ಎಂಬಂತೆ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸಿದ್ದ ಸ್ವಾಮೀಜಿ ಅವರ ಆಸೆಯಂತೆ ದಾಸೋಹ ಮುಂದುವರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ಕನಸು ಕಂಡಿದ್ದ ಶ್ರೀಗಳು, ಗ್ರಾಮೀಣ ಭಾಗದಲ್ಲೂ ಶಾಲೆಗಳನ್ನು ತೆರೆದು ಶಿಕ್ಷಣ ನೀಡಿದರು. ಅವರು ಹಚ್ಚಿದ ದೀಪ ಈಗ ಮನೆ ಮನೆಗಳಲ್ಲಿ ಬೆಳಗುತ್ತಿದೆ. ಮಠದಲ್ಲಿ ಕಲಿತ ಲಕ್ಷಾಂತರ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಅವರ ಆದರ್ಶ ಮತ್ತು ಸಂದೇಶಗಳನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕ ಎಂದು ಹೇಳಿದರು.

ಶಿಲ್ಪಕಲೆಯಲ್ಲಿ ಚಿನ್ನದ ಪದಕ ಗಳಿಸಿದ ಲಿಖಿತ್‌ಗೌಡ, ಕಿರುತೆರೆ ನಟಿ ಮೌನ, ಗುತ್ತಿಗೆದಾರ ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಗುರುವಂದನೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಕುಮಾರ ಶ್ರೀಗಳ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ನಂದಿಧ್ವಜ ಕುಣಿತ, ವೀರಭದ್ರ ನೃತ್ಯ ಮೆರವಣಿಗೆಗೆ ಮೆರುಗು ನೀಡಿತು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು.

ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ವಿವಿಧ ಮಠಗಳ ಮಠಾಧಿಪತಿಗಳಾದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಮಲ್ಲೇಶ ಸ್ವಾಮೀಜಿ, ಮಹಾಂತ ಶಿವಲಿಂಗ ಸ್ವಾಮೀಜಿ, ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ನಿಶ್ಚಲದೇಶಿಕೇಂದ್ರ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಮಲ್ಲಿಕಾರ್ಜುನಾ ಸ್ವಾಮೀಜಿ, ದೇವೇಂದ್ರ ಸ್ವಾಮೀಜಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು, ಸದಸ್ಯರಾದ ಶೀಲಾ ಡಿಸೋಜ, ಜಯಂತಿ ಶಿವಕುಮಾರ್, ಹೈಕೋರ್ಟ್ ವಕೀಲ ಎಚ್.ಎಸ್.ಚಂದ್ರಮೌಳಿ, ಶ್ರೀ ಕ್ಷೇಥ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಚ್.ರೋಹಿತ್ ಇದ್ದರು.