ಹನೂರು: ಶಿವಶರಣ ನುಲಿಯ ಚಂದಯ್ಯ ಅವರು ಬಸವಣ್ಣ ಅವರ ಅನುಭವ ಮಂಟಪದಲ್ಲಿ ಉನ್ನತ ಸ್ಥಾನ ಪಡೆಯಲು ಅವರ ಕಾಯಕನಿಷ್ಠೆ ಹಾಗೂ ಪ್ರಮಾಣಿಕತೆಯೇ ಪ್ರಮುಖ ಕಾರಣವಾಗಿತ್ತು ಎಂದು ಶಾಸಕ ಎಂ.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಅವರ 916ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಬಸವಣ್ಣ ಅವರ ಸಮಕಾಲೀನ ನುಲಿಯ ಚಂದಯ್ಯ ಅವರು ಕಾಯಕದ ಮೂಲಕವೇ ಉನ್ನತಿ ಕಂಡವರು. ಹಗ್ಗ ನೇಯುವ ಕಾಯಕದಿಂದ ಬಂದ ಹಣದಿಂದ ದಾಸೋಹ ನಡೆಸಿದ ಶಿವಶರಣ. ಬಸವ ಕಲ್ಯಾಣಕ್ಕೆ ಆಗಮಿಸಿದ ಇವರು ಕಾಯಕ ತತ್ವವನ್ನು ಜನಮಾನಸದಲ್ಲಿ ಬಿತ್ತುವುದರ ಮೂಲಕ ದುಡಿಯುವ ವರ್ಗಕ್ಕೆ ಅನುವು ಮಾಡಿಕೊಟ್ಟವರು. ಶ್ರದ್ಧಾಪೂರ್ವಕವಾಗಿ ಕೆಲಸ ಮಾಡಿದಾಗ ಸ್ವಾಭಿಮಾನದ ಜತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ತೋರಿಸಿಕೊಟ್ಟವರು.
ಆದ್ದರಿಂದ ಇವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು. ಈ ದಿಸೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು. ಕ್ಷೇತ್ರದಲ್ಲಿ ಕೂಲಿ ಕೆಲಸಕ್ಕಾಗಿ ಇತರೆಡೆಗೆ ವಲಸೆ ಹೋಗಿರುವ ಜನರನ್ನು ಕರೆತರಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ. ಅಲ್ಲದೇ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಬೇಡಿಕೆಯಂತೆ ಸ್ಮಶಾನ, ಸಮುದಾಯ ಭವನ, ಶಾಲೆ, ಹಾಸ್ಟೆಲ್ ನಿರ್ಮಾಣಕ್ಕೆ 2 ಎಕರೆ ಜಮೀನು ದೊರಕಿಸಿಕೊಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಸಮುದಾಯದ ಮುಖಂಡರೊಬ್ಬರು ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಹನೂರು ಕ್ಷೇತ್ರದ ಕೆಲವೊಂದು ಗ್ರಾಮಗಳು ಇದುವರೆಗೂ ಬಸ್ ಮುಖವನ್ನೇ ಕಂಡಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಆದಾಗ್ಯೂ ಇದನ್ನು ಸವಾಲಾಗಿ ಸ್ವೀಕರಿಸಿ 5 ವರ್ಷಗಳಲ್ಲಿ ಹಂತಹಂತವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊಟ್ಟಗೆರೆ ಮಾತನಾಡಿ, ಚಾ.ನಗರ ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಕುಳುವ ಸಮುದಾಯವು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸರ್ಕಾರದಿಂದ ಪ್ರಾತಿನಿಧ್ಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಗುರುಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ದೇವನಹಳ್ಳಿ ಮಾಜಿ ಶಾಸಕ ಚಂದ್ರಣ್ಣ, ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ಶಿವಾನಂದ ಭಜಂತ್ರಿ, ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಆದರ್ಶ್, ಶಿವಮೊಗ್ಗ ಕಾಂಗ್ರೆಸ್ ವಕ್ತಾರೆ ಪಲ್ಲವಿ, ಅಖಿಲ ಭಾರತ ಕುಳುವ ಮಹಾಸಂಘದ ಕಾರ್ಯದರ್ಶಿ ಅನಂತ್‌ಕುಮಾರ್, ಜಿಲ್ಲಾಧ್ಯಕ್ಷ ಮಾದೇಶ್, ವಕೀಲ ಮಹದೇವ, ಮುಖಂಡರಾದ ಪಂಚಾಕ್ಷರಿ, ಶ್ರೀನಿವಾಸ್ ಇದ್ದರು.