ಕೋಲಾರ: ಮಾಲೂರಿನ ಶಿವಾರಪಟ್ಟಣದಲ್ಲಿ ಶಿಲ್ಪಗ್ರಾಮ ಅಭಿವೃದ್ಧಿಗೆ 1 ಕೋಟಿ ರೂ. ಘೋಷಿಸುವ ಮೂಲಕ ಕಡೆಗೂ ಸರ್ಕಾರ ಕಣ್ತೆರೆಯಿತೆಂದು ಶಿಲ್ಪಿಗಳು ಸಮಾಧಾನಪಟ್ಟುಕೊಂಡಿದ್ದರಾದರೂ ಕರೊನಾದಿಂದ ಹಿನ್ನಡೆಯಾಗಿದೆ.
ಪಾರಂಪರಿಕ ಶಿಲ್ಪಗ್ರಾಮವಾಗಿ ಗುರುತಿಸಿರುವ ಶಿವಾರಪಟ್ಟಣ ಅಭಿವೃದ್ಧಿ ಬಗ್ಗೆ ಶಿಲ್ಪಿಗಳು ಕಟ್ಟಿಕೊಂಡ ಕನಸು ಇಂದು ನಿನ್ನೆಯದಲ್ಲ, ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಶಿಲ್ಪಿಗಳ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದ್ದು ಒಂದು ಕಾರಣವಾದರೆ, ಸಮುದಾಯದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಈ ದಿಸೆಯಲ್ಲಿ ಗಮನಹರಿಸಿಲ್ಲ ಎಂಬ ಅಸಮಾಧಾನ ಶಿಲ್ಪಿಗಳದ್ದು.
1 ಕೋಟಿ ರೂ.ಅನುದಾನ: ಶಿಲ್ಪಿಗಳ ತವರೂರಿನಲ್ಲಿ ಮಾರಾಟ ಮಳಿಗೆ ಇಲ್ಲ, ಮನೆ ಮುಂಭಾಗವೇ ಮಾರಾಟದ ಜಾಗ. ಗ್ರಾಮದ ಅಭಿವೃದ್ಧಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 2007ರಲ್ಲಿ 1 ಕೋಟಿ ರೂ. ಬಿಡುಗಡೆ ಮಾಡಿತ್ತಾದರೂ ಅನುಷ್ಠಾನಗೊಂಡಿರಲಿಲ್ಲ. 2010ರಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಶಿಲ್ಪಕೃತಿಗಳ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿತ್ತು. 74 ಲಕ್ಷ ರೂ.ಗಳ ಕ್ರಿಯಾಯೋಜನೆಯಲ್ಲಿ ಕಟ್ಟಡಕ್ಕೆ 59 ಲಕ್ಷ ರೂ. ನಿಗದಿಪಡಿಸಿತ್ತು. ಸಂಕೀರ್ಣದಲ್ಲಿ ಶಿಲ್ಪಕೃತಿಗಳ ಶೇಖರಣೆ, ಪ್ರದರ್ಶನ, ಮಾರಾಟ ವ್ಯವಸ್ಥೆ, ಸಭಾಂಗಣ, ಗ್ರಂಥಾಲಯ, ವಿದೇಶಿ ಅತಿಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ, ಮಾಹಿತಿ ಕೇಂದ್ರ, ಶೌಚಗೃಹ ವ್ಯವಸ್ಥೆ ಹೊಂದಿತ್ತು.
ಗುತ್ತಿಗೆದಾರರರು ಕೆಲಸ ಶುರು ಮಾಡಿ ಅರ್ಧ ಮುಗಿದು ಒಂದು ಹಂತಕ್ಕೆ ಬಂದಾಗ ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಕಾಮಗಾರಿ ಅರ್ಧಕ್ಕೆ ನಿಂತು ನಿರ್ಮಾಣ ವೆಚ್ಚ ಜಾಸ್ತಿಯಾಗಿದ್ದರಿಂದ ಗುತ್ತಿಗೆದಾರರು ಕಾಮಗಾರಿ ಮೊತ್ತ ಪರಿಷ್ಕರಿಸುವಂತೆ ಸರ್ಕಾರವನ್ನು ಕೋರಿದ್ದರಾದರೂ ಪ್ರಗತಿ ಕಂಡಿಲ್ಲ.
ಕೊಂಪೆಯಾದ ಕಟ್ಟಡ: ಅರ್ಧಕ್ಕೆ ನಿಂತಿರುವ ಸಂಕೀರ್ಣ ಕಟ್ಟಡ ಕೊಂಪೆಯಂತಾಗಿ ಒಳಗೆ, ಹೊರಗೆ ಗಿಡ-ಗಂಟಿ ಬೆಳೆದಿವೆ. ಮೇಲ್ಛಾವಣೆ ಹೆಂಚು ಅಲ್ಲಲ್ಲಿ ಕಳಚಿ ಬಿದ್ದಿವೆ. ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಬಹುಶಃ ಈವರೆಗೆ ಮಾಡಿದ ಖರ್ಚು ವೆಚ್ಚಗಳು ವ್ಯರ್ಥವೇ.
ಕರೊನಾ ಗುದ್ದು: ಶಿಲ್ಪಗ್ರಾಮ ಅಭಿವೃದ್ಧಿಗೆ ಸರ್ಕಾರ 1 ಕೋಟಿ ರೂ. ಮಂಜೂರು ಮಾಡಿತ್ತು. ಈ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಗುತ್ತಿಗೆದಾರರೊಬ್ಬರು 73 ಲಕ್ಷ ರೂ.ಗಳಿಗೆ ಟೆಂಡರ್ ಕೋಟ್ ಮಾಡಿದ್ದರು. ಈ ಮಧ್ಯೆ ಕರೊನಾ ಹಿನ್ನೆಲೆಯಲ್ಲಿ ಕಾರ್ಯಾದೇಶ ನೀಡಿರುವ ಅಭಿವೃದ್ಧಿ ಕಾಮಗಾರಿ ಹೊರತುಪಡಿಸಿ ಹೊಸ ಕಾಮಗಾರಿ ಆರಂಭಿಸಲು ಮತ್ತೊಮ್ಮೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯಬೇಕೆಂದು ಮೇ 4ರಂದು ಇಲಾಖೆ ಆದೇಶಿಸಿತ್ತು.
ಹೀಗಾಗಿ ಟೆಂಡರ್ ಪ್ರಕ್ರಿಯೆ ಅರ್ಧಕ್ಕೆ ನಿಂತಿದೆ. ಸರ್ಕಾರ ಗ್ರಾಮದ ಅಭಿವೃದ್ಧಿಗೆ ಅನುದಾನ ಘೋಷಿಸಿದ್ದರಿಂದ ಅನುಷ್ಠಾನಕ್ಕೆ ತರಲಿದೆ ಎಂಬ ನಿರೀಕ್ಷೆಯಲ್ಲಿದ್ದ ಶಿಲ್ಪಿಗಳಿಗೆ ಆರ್ಥಿಕ ಇಲಾಖೆ ಆದೇಶ ಮತ್ತೊಂದು ಗುದ್ದು ನೀಡಿದೆ.
ಆರ್ಥಿಕ ಇಲಾಖೆಯಿಂದ ಶಿಲ್ಪ ಗ್ರಾಮದ ಅಭಿವೃದ್ಧಿಗೆ ಅನುದಾನ ಬಂದೀತೆ ಎಂಬ ಆತಂಕ ಶಿಲ್ಪಿಗಳನ್ನು ಕಾಡಲಾರಂಭಿಸಿದ್ದು, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆಗೆ ಪ್ರಯತ್ನಿಸಬೇಕಿದೆ.
ಶಿಲ್ಪಗ್ರಾಮ ಅಭಿವೃದ್ಧಿ ಬೇಡಿಕೆ ಈವರೆಗೂ ನನಸಾಗಿಲ್ಲ, ಶಿಲ್ಪಿಗಳಿಗೆ ಕನಿಷ್ಠ ಸೌಕರ್ಯವೂ ಇಲ್ಲ. ಸರ್ಕಾರ ಘೋಷಿಸಿರುವ 1 ಕೋಟಿ ರೂ. ಅನುದಾನ ಶೀಘ್ರ ಬಿಡುಗಡೆ ಮಾಡಿ ಅಭಿವೃದ್ಧಿಗೆ ಮುಂದಾಗಬೇಕು. ಜಗನ್ನಾಥಾಚಾರಿ, ಶಿಲ್ಪಿ, ಶಿವಾರಪಟ್ಟಣ ಕರೊನಾ ಹಿನ್ನೆಲೆಯಲ್ಲಿ ಹೊಸದಾಗಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಬೇಕಿರುವುದರಿಂದ ಜು.8ಂದು ಪ್ರಸ್ತಾವನೆ ಸಲ್ಲಿಸಿ ಟೆಂಡರ್ ಕರೆಯಲು ಅನುಮತಿ ಕೇಳಲಾಗಿದೆ. ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆಯುವ ಜತೆಗೆ ಮೇಲಧಿಕಾರಿಗಳನ್ನು ಭೇಟಿ ಮಾಡಿ ಹಣ ತರಲು ಪ್ರಯತ್ನಿಸಲಾಗುವುದು. ಎಂ.ಆರ್. ರವಿಕುಮಾರ್, ಜಿಪಂ ಸಿಇಒ, ಕೋಲಾರ