ಜಿಲ್ಲೆ

ಶಿಲುಬೆ ತೆರವುಗೊಳಿಸಲು ಮನವಿ

ಚಿಕ್ಕಬಳ್ಳಾಪುರ : ತಾಲೂಕಿನ ಅರಿಕೆರೆಯ ಸರ್ಕಾರಿ ಗೋಮಾಳ ಜಾಗದಲ್ಲಿ ಅಳವಡಿಸಿರುವ ಕ್ರೈಸ್ತ ಸಮುದಾಯದ ಶಿಲುಬೆಗಳನ್ನು ತೆರವುಗೊಳಿಸಿ, ಕಬಳಿಸಿರುವ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ಹಿಂದೂಪರ ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿವೆ.

ನಗರದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ನಾಗಪ್ರಶಾಂತುಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ

ರಾಷ್ಟ್ರೀಯ ಭಜರಂಗದಳ ಸಹ ಸಂಯೋಜಕ ಸೂರ್ಯನಾರಾಯಣ ಜೀ, ಅರಿಕೆರೆ ಬೆಟ್ಟದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಶಿಲುಬೆಗಳನ್ನು ಸ್ಥಾಪಿಸಲಾಗಿದೆ. ಜತೆಗೆ ಸ್ಥಳೀಯವಾಗಿ ಜನರನ್ನು ಸೇರಿಸಿ ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರಿ ಜಾಗವನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿ. ಆದರೆ, ಇಲ್ಲಿ ರಾಜಾರೋಷವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ವಿವಾದವು ದೊಡ್ಡದಾಗುವುದರೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಂ.ಎನ್.ಆನಂದ ತೀರ್ಥ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಭಜರಂಗದಳ ವಿಭಾಗ ಸಂಯೋಜಕ ನರೇಶ್, ನಗರ ಸಂಯೋಜಕ ಕಾರ್ತಿಕ್, ಕಾರ್ಯಕರ್ತರಾದ ಮನೋಜ್ ಕುಮಾರ್, ನಮಿಷ್ ಕೌಶಿಕ್, ಅಖಿಲ್, ಪವನ್ ಮತ್ತಿತರರು ಇದ್ದರು.