ಚಿತ್ರದುರ್ಗ: ಮಾನವ ಮೊಟ್ಟ ಮೊದಲು ಕಬ್ಬಿಣ ಬಳಕೆ ಮಾಡಿದ್ದು, ಬೃಹತ್ ಶಿಲಾಯುಗ ಕಾಲದಲ್ಲಿ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಕಮಲಾಪುರದ ಡಾ.ಆರ್. ಶೇಜೇಶ್ವರ ತಿಳಿಸಿದರು.
ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನದಿಂದ ಐಎಂಎ ಸಭಾಂಗಣದಲ್ಲಿ ಭಾನುವಾರ ನಡೆದ 51ನೇ ಉಪನ್ಯಾಸದಲ್ಲಿ ಕರ್ನಾಟಕ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಇತ್ತೀಚಿನ ಅನ್ವೇಷಣೆಗಳೆಂಂಬ ವಿಷಯ ಕುರಿತು ಮಾತನಾಡಿದರು.
ಶಿಲಾಯುಗ, ಮಡಿಕೆ, ಶಿಲಾ, ತಾಮ್ರಶಾಸನ, ವೀರಗಲ್ಲು, ಮೂರ್ತಿಶಿಲ್ಪ, ಮಾಸ್ತಿಗಲ್ಲು, ಹಳೆ ಶಿಲಾಯುಗ, ನೂತನ ಶಿಲಾಯುಗ, ಅರಿಯುವ ಕಲ್ಲು, ಶಿಲಾಯುಧ, ನಿಲಿಸುಗಲ್ಲು, ಕದಂಬರು ಆಳಿದ ಕೋಟೆಗಳು, ಶಾಸನಗಳು ಸಂಶೋಧನೆಯಿಂದ ಲಭ್ಯವಾಗಿವೆ. ಕೆಳದಿ ಅರಸರ ಫಲವಂತಿಕೆ ಶಿಲ್ಪಗಳು, ದ್ವಿಬಾಹು ಗಣೇಶ ಇವು ನ್ಯಾಮತಿ ತಾಲೂಕಿನ ಮಾದಾಪುರದಲ್ಲಿ ಸಿಕ್ಕಿವೆ ಎಂದರು.
ಬಾದಾಮಿ ಚಾಲುಕ್ಯರ ಶಾಸನ, ಸಿಡಿತಲೆ ವೀರಗಲ್ಲುಗಳು, ರಾಷ್ಟ್ರಕೂಟರ ಕಾಲದ ವೀರಗಲ್ಲುಗಳಲ್ಲಿ ವ್ಯಕ್ತಿ ಪೂಜೆಯನ್ನು ಕಾಣಬಹುದು. ರಾಜ್ಯದಲ್ಲಿ ಬರಗಾಲ ಉಲ್ಲೇಖಿಸುವ ಮೊದಲ ಶಾಸನ, ರಾಕೆಟ್‌ಗಳು ಸಂಶೋಧನೆಯಿಂದ ಬೆಳಕಿಗೆ ಬಂದಿವೆ ಎಂದು ಹೇಳಿದರು.
ಕೋಟೆಯ ಚಿತ್ರಣ, ಸೂರ್ಯಗ್ರಹಣ, ಚಂದ್ರಗ್ರಹಣ, ಶಿಲ್ಪಗಳು, ಸುವರ್ಣದಾನ ನೀಡುವ ಆತ್ಮಬಲಿದಾನದ ಶಿಲ್ಪ, ಹಂದಿ, ಮೊಲ ಬೇಟೆಯ ವೀರ ಮಾಸ್ತಿಗಲ್ಲುಗಳು, ಮಹಾರಾಷ್ಟ್ರದಲ್ಲಿ ಗರುಢ ನಂದಿ, ಶಿವಪ್ಪನಾಯಕ ಅರಮನೆಯಲ್ಲಿ ಮದ್ದು ತುಂಬಿದ ರಾಕೆಟ್‌ಗಳು ಸಿಕ್ಕಿವೆ ಎಂದು ವಿವರಿಸಿದರು.
ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್. ಮಹಂತೇಶ್ ಮಾತನಾಡಿ, ಐತಿಹಾಸಿಕ ಚಿತ್ರದುರ್ಗದ ಕೋಟೆಗೆ ತನ್ನದೆ ಆದ ಇತಿಹಾಸವಿದೆ. ಆಳ್ವಿಕೆ ನಡೆಸಿದ ಪಾಳೆಗಾರರನ್ನು ಕೇವಲ ನಾಯಕ ಸಮುದಾಯಕ್ಕಷ್ಟೇ ಸಿಮೀತಗೊಳಿಸುವುದು ಸರಿಯಲ್ಲ ಎಂದು ಮನವಿ ಮಾಡಿದರು.
ಇತಿಹಾಸ ಕೂಟದ ನಿರ್ದೇಶಕ ಡಾ. ಲಕ್ಷ್ಮಣ ತೆಲಗಾವಿ, ಇಲಾಖೆ ಸಹಾಯಕ ನಿರ್ದೇಶಕ ಜಿ. ಪ್ರಹ್ಲಾದ್, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ. ಗುಣವತಿ ಇತರರಿದ್ದರು.