ಹಾಸನ: ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಹಾಗೂ ಕೊಲ್ಲಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ ಭೂ ಕುಸಿತದ ವೇಳೆ ಸಮರೋಪಾದಿ ಹಗಲಿರುಳು ಕಾರ್ಯನಿರ್ವಹಿಸಿ ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಿದ ಜಿಲ್ಲಾಡಳಿತ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿಯ ಶ್ರಮಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಶಿರಾಡಿಘಾಟ್ ರಸ್ತೆಯ ದೊಡ್ಡತಪ್ಪಲೆ ಬಳಿ ಕಳೆದ ಬುಧವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿತ್ತು. ಕಾರೊಂದರ ಮೇಲೆ ಮಣ್ಣು ಬಿದ್ದು ಇಡೀ ವಾಹನ ಅಪ್ಪಚ್ಚಿಯಾಗಿತ್ತು. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಶಿರಾಡಿಘಾಟ್ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದರು. ಹೀಗಾಗಿ ರಾಜಧಾನಿ ಬೆಂಗಳೂರು ಹಾಗೂ ಮಂಗಳೂರು ಸಂಪರ್ಕಿಸುವ ಪ್ರಮುಖ ಮಾರ್ಗವೇ ಬಂದ್ ಆಗಿ ಸಾವಿರಾರು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಜನರು ಪರದಾಡಿದರು. ಬದಲಿ ಮಾರ್ಗಗಳೂ ಬಂದ್ ಆದ್ದರಿಂದ ಸಮಸ್ಯೆ ಬಿಗಡಾಯಿಸಿತು. ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಎನ್‌ಎಚ್‌ಎಐ ಸಮನ್ವಯತೆಯಿಂದ ಹಗಲಿರುಳು ಕೆಲಸ ಮಾಡಿ ರಸ್ತೆಗೆ ಕುಸಿದಿದ್ದ ಮಣ್ಣನ್ನು ತೆರವುಗೊಳಿಸಿ ಒಂದೇ ದಿನದಲ್ಲಿ ಹಗಲು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಎನ್‌ಎಚ್‌ಎಐ ಹಾಸನ ಯೋಜನೆ ಅನುಷ್ಠಾನ ಘಟಕ (ಪಿಐಯು)ದ ಯೋಜನಾ ನಿರ್ದೇಶಕ ಪ್ರವೀಣ್, ತಮ್ಮ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆದಾರರ ಕಡೆಯ ಕಾರ್ಮಿಕರು, ಯಂತ್ರಗಳೊಂದಿಗೆ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಅವುಡುಗಚ್ಚಿದ್ದ ಮಣ್ಣು ತೆರವುಗೊಳಿಸಿದರು. ಈ ಕಾರ್ಯಕ್ಕೆ ಸಾರ್ವಜನಿಕರು, ವಾಹನ ಸವಾರರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸುರಿಯುವ ಮಳೆಯಲ್ಲಿ ಸಾಹಸ:
ಒಂದೆಡೆ ಕುಂಭದ್ರೋಣ ಮಳೆ, ಇನ್ನೊಂದೆಡೆ ಪದೇಪದೆ ಕುಸಿಯುತ್ತಿರುವ ಭಾರಿ ಪ್ರಮಾಣದ ಮಣ್ಣು ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಕಾರ್ಯಾಚರಣೆಗೆ ಸವಾಲಾಗಿದ್ದವು. ಇಂತಹ ಸ್ಥಿತಿಯಲ್ಲಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಪ್ರವೀಣ್ ಹಾಗೂ ಅಧಿಕಾರಿಗಳು ಮಳೆಯಲ್ಲಿ ನೆನೆಯುತ್ತಲೇ ಕಾರ್ಯಾಚರಣೆ ನಡೆಸಿದರು. ಅಧಿಕಾರಿಗಳು, ಸಿಬ್ಬಂದಿ ಆಹಾರ, ನಿದ್ರೆಗಳನ್ನು ತೊರೆದು ಕಾರ್ಯನಿರ್ವಹಿಸಿದರು. ಕೊಲ್ಲಹಳ್ಳಿ ಭೂ ಕುಸಿತ ಪ್ರದೇಶದಲ್ಲಿ ಮಳೆ ನೀರು ರಸ್ತೆಯ ತಡೆಗೋಡೆ ಕೊರೆದು ಮಣ್ಣು ಕುಸಿಯದಂತೆ ನೋಡಿಕೊಳ್ಳಲು ದೊಡ್ಡ ಟಾರ್ಪಲ್‌ಗಳನ್ನು ಹರಡಿ ರಸ್ತೆ ತಡೆಗೋಡೆಯನ್ನು ರಕ್ಷಿಸಿದರು. ತುರ್ತು ದುರಸ್ತಿ ಕಾರ್ಯ ನಡೆಸಿ ಹೆಚ್ಚಿನ ಹಾನಿ ತಡೆದರು.
ಪೊಲೀಸರ ಮುನ್ನೆಚ್ಚರಿಕೆ ತಪ್ಪಿದ ಅವಘಡಗಳು:
ದೊಡ್ಡತಪ್ಪಲೆ ಬಳಿ ಭಾರಿ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದು ಬೀಳುತ್ತಿರುವ ಮಾಹಿತಿ ಸಿಕ್ಕ ತಕ್ಷಣ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಕೈಗೊಂಡ ಕ್ರಮಗಳಿಂದ ಭಾರಿ ಅನಾಹುತಗಳು ತಪ್ಪಿದವು.
ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣೆ ಪಿಎಸ್‌ಐ ಸ್ಥಗಿತಗೊಂಡ ವಾಹನ ಸಂಚಾರ ಸುಗಮಗೊಳಿಸಲು ಏಕಮುಖ ಸಂಚಾರ ವ್ಯವಸ್ಥೆ ರೂಪಿಸಿದರು. ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಿ ಸುರಕ್ಷಿತವಾದ ಸ್ಥಳದ ಮೂಲಕವೇ ವಾಹನಗಳು ಚಲಿಸುವಂತೆ ಕ್ರಮಕೈಗೊಂಡರು. ತಾವು ಖುದ್ದಾಗಿ ಮಾರನಹಳ್ಳಿಯ ಹೊರ ಠಾಣೆ ಎದುರು ನಿಂತು ಮಂಗಳೂರು ಕಡೆಯಿಂದ ಬರುವ ಲಘು ವಾಹನಗಳನ್ನು ಕಾಡುಮನೆ ರಸ್ತೆ ಮಾರ್ಗವಾಗಿ ಸಕಲೇಶಪುರ ಕಡೆಗೆ ಹೋಗುವ ವ್ಯವಸ್ಥೆ ಮಾಡಿದರು. ಭಾರಿ ವಾಹನಗಳನ್ನು ತಡೆದು ನಿಲ್ಲಿಸಿದರು. ವಾಹನ ಸಂಚಾರ ನಿಷೇಧವಾದ ನಂತರ ಚಾರ್ಮಾಡಿ ಮಾರ್ಗದಲ್ಲಿ ಗಡಿಬಿಡಿಯಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದರು.