ಜಿಲ್ಲೆ

ಶಿರಾಡಿ ಮಾರ್ಗ ಲಘು ವಾಹನ, ಬಸ್‌ಗಳಿಗೆ ಮುಕ್ತ

20 ಟನ್‌ಗಿಂತ ಕಡಿಮೆ ತೂಕದ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ಅನುಮತಿ

ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಕಲೇಶಪುರ ತಾಲೂಕು ದೋಣಿಗಲ್ ಬಳಿ ಭೂ ಕುಸಿತ ಉಂಟಾಗಿ ಕಳೆದ ಜುಲೈ 16 ರಿಂದ ಶಿರಾಡಿ ಘಾಟ್ ಮಾರ್ಗದಲ್ಲಿ ಸಂಪೂರ್ಣ ಬಂದ್ ಆಗಿದ್ದ ವಾಹನಗಳ ಸಂಚಾರ ಗುರುವಾರ ಮಧ್ಯಾಹ್ನದಿಂದ ಮತ್ತೆ ಆರಂಭವಾಗಿದೆ.
ಆದರೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಈ ಸಂಚಾರ ಅವಕಾಶವಿದ್ದು, ಸಂಜೆ 6 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ತುರ್ತು ವಾಹನಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಲಘು ವಾಹನ, ಕಾರು, ಬಸ್ ಸೇರಿದಂತೆ 20 ಟನ್‌ಗಿಂತ ಕಡಿಮೆ ತೂಕದ 6 ಚಕ್ರಗಳ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅನುಮತಿ ನೀಡಿ ಅದೇಶ ಹೊರಡಿಸಿದ್ದಾರೆ.

ಶಿರಾಡಿ ಮಾರ್ಗ ಬಂದ್ ಆಗಿದ್ದರಿಂದ ಪ್ರಯಾಣಿಕ ವಾಹನಗಳು ಚಾರ್ಮಾಡಿ ಮತ್ತು ಸಂಪಾಜೆ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಆ ಮಾರ್ಗಗಳಲ್ಲೂ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಈಗ ಸಕಲೇಶಪುರ ಭಾಗದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಭೂ ಕುಸಿತವಾಗಿರುವ ಜಾಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ದೋಣಿಗಲ್‌ನಿಂದ ಮಾರನಹಳ್ಳಿವರೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಭಾರಿ ವಾಹನಗಳಿಗಿಲ್ಲ ಅವಕಾಶ:
ಬುಲೆಟ್ ಟ್ಯಾಂಕರ್‌ಗಳು, ಶಿಪ್ ಕಾರ್ಗೊ ಕಂಟೈನರ್‌ಗಳು, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವಾಹನಗಳು, ಮಲ್ಟಿ ಆಕ್ಸೆಲ್ ಟ್ರಕ್‌ಗಳು ಸೇರಿದಂತೆ 20 ಟನ್‌ಗಿಂತ ಹೆಚ್ಚಿನ ತೂಕದ ಎಲ್ಲಾ ರೀತಿಯ ವಾಹನಗಳಿಗೆ ದಿನದ 24 ಗಂಟೆಗಳ ಕಾಲ ಈ ಮಾರ್ಗದ ಸಂಚಾರ ನಿಷೇಧ ಮುಂದುವರಿದಿದೆ.

ಎರಡು ಕಡೆ ಚೆಕ್‌ಪೋಸ್ಟ್:
‘‘ಸುರಕ್ಷತೆ ದೃಷ್ಟಿಯಿಂದ ಈ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ದೊಣಿಗಲ್ ಮತ್ತು ಮಾರನಹಳ್ಳಿ ಬಳಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು, ಹಂತ ಹಂತವಾಗಿ ಒಂದು ಬದಿಯ ವಾಹನಗಳು ಸಂಚರಿಸಿದ ನಂತರ ಮತ್ತೊಂದು ಬದಿಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಈ ಸಂಬಂಧ ದಕ್ಷಿಣ ಕನ್ನಡ ಹಾಗೂ ಉಪ್ಪಿನಂಗಡಿ ಪೊಲೀಸರೊಂದಿಗೂ ಚರ್ಚಿಸಲಾಗಿದೆ. ಈ ಮಾರ್ಗದಲ್ಲಿ ಭಾರಿ ವಾಹನಗಳನ್ನು ಬಿಡದಂತೆ ಸೂಚನೆ ನೀಡಲಾಗಿದೆ.’’
-ಹರಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ.