ಜಿಲ್ಲೆ

ಶಿರಸಿಗೂ ಬಂತು ಕರೊನಾ ಹೆಮ್ಮಾರಿ

ಶಿರಸಿ: ಜಿಲ್ಲೆಯಲ್ಲಿ ಈವರೆಗೆ ಭಟ್ಕಳ, ಹೊನ್ನಾವರ ಹಾಗೂ ಕುಮಟಾ ತಾಲೂಕುಗಳಿಗೆ ಮಾತ್ರ ಸೀಮಿತವಾಗಿದ್ದ ಕರೊನಾ ಪ್ರಕರಣಗಳು ಈಗ ಪ್ರಮುಖ ವಾಣಿಜ್ಯ ಕೇಂದ್ರ ಶಿರಸಿಗೂ ವ್ಯಾಪಿಸಿವೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಕರೊನಾ ಪ್ರಕರಣಗಳು ದೃಢಪಟ್ಟಿದ್ದರೂ, ಶಿರಸಿಯಲ್ಲಿ ಆ ಭೀತಿ ಇಲ್ಲ ಎಂದು ಇಲ್ಲಿನ ಜನ ನಿಟ್ಟುಸಿರುಬಿಟ್ಟಿದ್ದರು. ಆದರೆ, ಗುರುವಾರ ಒಂದೇ ದಿನ 9 ಕೇಸ್​ಗಳು ದೃಢಪಟ್ಟಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಇದರಲ್ಲಿ ಇಬ್ಬರು ಉಡುಪಿ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಹೊರರಾಜ್ಯದಿಂದ ವಾಪಸಾದ ಮೂರು ಕುಟುಂಬದ 8 ಮಂದಿ ಹಾಗೂ ದುಬೈನಿಂದ ವಾಪಸಾದ ಒಬ್ಬರಿಗೆ ಕರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಇವರೆಲ್ಲ ಒಂದೇ ದಿನ ನಗರಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಸೋಂಕು ದೃಢಪಟ್ಟಿರುವ ಎಂಟು ಜನರು ತಾಲೂಕಿನ ಕಲ್ಲಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದರು. ಒಬ್ಬರು ಹೋಟೆಲ್ ಕ್ವಾರಂಟೈನಲ್ಲಿ ಇದ್ದರು.

ಇಡೀ ಕುಟುಂಬಕ್ಕೆ ಪಾಸಿಟಿವ್: ಮುಂಬೈನಲ್ಲಿ ವಾಸವಿದ್ದ ಶಿರಸಿ ಮೂಲದ 5 ಮಂದಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆದು ಮೇ 14 ರಂದು ಮುಂಬೈ ಬಿಟ್ಟು 15ರಂದು ಶಿರಸಿ ತಲುಪಿದ್ದರು. ವಿಚಾರ ತಿಳಿದ ತಾಲೂಕು ಆಡಳಿತವು ನಗರದ ಚಿಪಗಿ ಗೇಟ್ ಬಳಿ ವಾಹನ ತಡೆದು ಸಾಂಸ್ಥಿಕ ಕ್ವಾಂರಂಟೈನ್​ಗೆ ಕಳುಹಿಸಿತ್ತು. ಇದರಲ್ಲಿ 6 ಮತ್ತು 7 ವರ್ಷದ ಇಬ್ಬರು ಬಾಲಕಿಯರಿಬ್ಬರು ಸೇರಿ ಕುಟುಂಬದ ಐವರಿಗೆ ಸೋಂಕು ದೃಢಪಟ್ಟಿದೆ.

ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಮೂಲದ ನಿವಾಸಿ ತನ್ನ ಹೆಂಡತಿ ಹಾಗೂ ಒಂದು ವರ್ಷದ ಮಗುವಿನ ಜತೆ ಮುಂಬೈನಿಂದ ಮೇ 15ರಂದು ಶಿರಸಿಗೆ ಆಗಮಿಸಿದ್ದರು. ಇವರನ್ನು ಇಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ ಹೆಂಡತಿ ಹಾಗೂ ಮಗುವಿಗೆ ಸೋಂಕು ದೃಢಪಟ್ಟಿದ್ದು, ಗಂಡನ ವರದಿ ಬಾಕಿ ಇದೆ. ಇನ್ನೊಂದು ಪ್ರಕರಣವು ಧಾರವಾಡದಲ್ಲಿ ವ್ಯವಹಾರ ಮಾಡುವ ಶಿರಸಿ ಮೂಲದ ವ್ಯಕ್ತಿಯದ್ದು. ಇವರು ಕೆಲಸದ ನಿಮಿತ್ತ ಮಾ. 18 ರಂದು ಮುಂಬೈಗೆ ತೆರಳಿದ್ದರು. ಲಾಕ್​ಡೌನ್ ಆದಾಗಿನಿಂದ ಸ್ನೇಹಿತನ ಜತೆ ಮುಂಬೈನ ಹೋಟೆಲ್ ಒಂದರಲ್ಲಿ ಕಾಲ ಕಳೆಯುತ್ತಿದ್ದ ಈತ ಮೇ 14ರಂದು ಮುಂಬೈ ಬಿಟ್ಟು 15ರಂದು ಶಿರಸಿ ನಗರಕ್ಕೆ ಆಗಮಿಸಿದ್ದ. ಈತ ಹಾಗೂ ಸ್ನೇಹಿತನನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಕಳುಹಿಸಲಾಗಿತ್ತು. ಈಗ ಈತನಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಸ್ನೇಹಿತನ ವರದಿಗೆ ಕಾಯಲಾಗುತ್ತಿದೆ.

ದುಬೈನಿಂದ ಬಂದ ಯುವಕನಿಗೆ ಸೋಂಕು ದುಬೈನಲ್ಲಿ ಶಿಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶಿರಸಿ ಮೂಲದ ಯುವಕ ಮಾರ್ಚ್ 1ರಂದು ದುಬೈ ಬಿಟ್ಟು ಮುಂಬೈಗೆ ವಾಪಸ್ ಆಗಿದ್ದ. ಮೇ 14ರಂದು ಅಲ್ಲಿಂದ ಹೊರಟು 15ರಂದು ಶಿರಸಿ ನಗರಕ್ಕೆ ಆಗಮಿಸಿದ್ದ. ಈ ತನಗೆ ಶಿಪ್​ನಲ್ಲಿ ರ್ಯಾಪಿಡ್ ಟೆಸ್ಟ್ ಮಾಡಿದ್ದರು ಎಂದು ತಿಳಿಸಿದ್ದರೂ ಈತನನ್ನು ಅಧಿಕಾರಿಗಳು ಸಾಂಸ್ಥಿಕ ಕ್ವಾರಂಟೈನ್​ಗೆ ಕಳುಹಿಸಿದ್ದರು. ಈಗ ಈತನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಹಾರಾಷ್ಟ್ರದ ಚಾಲಕ ಪರಾರಿ ಮಹಾರಾಷ್ಟ್ರದಿಂದ ಯಾವುದೇ ಪಾಸ್ ಇಲ್ಲದೆ ಶಿರಸಿಗೆ ಬಂದಿದ್ದ ಇಬ್ಬರು ಚಾಲಕರಲ್ಲಿ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದರೆ ಮತ್ತೊಬ್ಬ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಇಬ್ಬರೂ ಬನವಾಸಿ ರಸ್ತೆಯ ದೀವಗಿ ವಾರ್ನರ್ ಫ್ಯಾಕ್ಟರಿ ಚಾಲಕರಾಗಿದ್ದು, ಇದರಲ್ಲಿ ಯೋಗೀಶ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಫ್ಯಾಕ್ಟರಿಗೆ ಸೇರಿದ್ದ ಸಹ್ಯಾದ್ರಿ ಕಾಲನಿಯ ಮನೆಯಲ್ಲಿ ತಂಗಿದ್ದರು. ಕ್ವಾರಂಟೈನ್ ಮಾಡುವ ಹಿನ್ನೆಲೆಯಲ್ಲಿ ಮಾಹಿತಿ ನೀಡದೇ ತಪ್ಪಿಸಿಕೊಂಡಿದ್ದ ಈ ಚಾಲಕರು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತಿದ್ದಂತೆ ಒಬ್ಬ ಮಹಾರಾಷ್ಟ್ರಕ್ಕೆ ವಾಪಸ್ಸಾಗಿದ್ದಾನೆ. ಯೋಗೀಶನನ್ನು ಅಲೇಖ ಇಂಟರ್ ನ್ಯಾಷನಲ್ ಕ್ವಾರಂಟೈನ್ ಸೆಂಟರ್​ನಲ್ಲಿ ಆರೋಗ್ಯ ತಪಾಸಣೆ ನಡೆಸಿ ವಾಪಸ್ ಮಹಾರಾಷ್ಟ್ರಕ್ಕೆ ಕಳುಹಿಸಿದ್ದಾರೆ. ದೀವಗಿ ಫ್ಯಾಕ್ಟರಿಯಲ್ಲಿ ಮಹಾರಾಷ್ಟ್ರದಿಂದ ಬಂದ ಹಲವು ಚಾಲಕರಿದ್ದು, ಕೆಲವರು ಮಾತ್ರ ಪಾಸ್ ಪಡೆದು ಬಂದಿದ್ದಾರೆ. ಇನ್ನೂ ಕೆಲವರು ಅನುಮತಿ ಪಡೆಯದೇ ಬಂದಿದ್ದು, ನಗರದ ವಿವಿಧ ಭಾಗಗಳಲ್ಲಿ ತಂಗಿದ್ದಾರೆ ಎನ್ನಲಾಗಿದೆ. ಶಿರಸಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಉಳಿದವರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.</