ಕಾರವಾರ: ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ಎರಡನೇ ದಿನ ಪೂರೈಸಿದೆ. ಎರಡೇ ದಿನದಲ್ಲಿ ಎನ್ಡಬ್ಲ್ಯುಕೆಆರ್ಟಿಸಿ ಶಿರಸಿ ವಿಭಾಗಕ್ಕೆ ಸುಮಾರು 1 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ.
ಜಿಲ್ಲೆಯಲ್ಲಿ ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕುಗಳು ಧಾರವಾಡ ವಿಭಾಗಕ್ಕೆ ಸೇರಿವೆ. ಬೇರೆಲ್ಲ ತಾಲೂಕುಗಳಲ್ಲಿ ಎನ್ಡಬ್ಲ್ಯುಕೆಆರ್ಟಿಸಿ ಶಿರಸಿ ವಿಭಾಗದಡಿ ಬಸ್ಗಳು ಓಡಾಡುತ್ತಿವೆ. ಗ್ರಾಮೀಣ ಭಾಗದ ಶೇ. 80 ರಷ್ಟು ಜನ ಸಂಚಾರಕ್ಕೆ ಸಾರಿಗೆ ಸಂಸ್ಥೆಯನ್ನೇ ನೆಚ್ಚಿಕೊಂಡಿದ್ದಾರೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರತಿ ದಿನ 290 ಮಾರ್ಗ ಹಾಗೂ ಜಿಲ್ಲೆಯ ವಿವಿಧ ಘಟಕಗಳಿಂದ ಹೊರ ರಾಜ್ಯ, ಜಿಲ್ಲೆಗಳಿಗೆ 220 ಮಾರ್ಗ ಸೇರಿ ಒಟ್ಟಾರೆ ದಿನಕ್ಕೆ 510 ಮಾರ್ಗಗಳಲ್ಲಿ (ರೂಟ್) ಸಾರಿಗೆ ಸಂಸ್ಥೆಯ ಬಸ್ಗಳು ಓಡಾಟ ನಡೆಸುತ್ತಿದ್ದವು. ಜಿಲ್ಲೆಯ ವ್ಯಾಪ್ತಿಯಲ್ಲಿ ಸರಾಸರಿ 11 ಸಾವಿರಕ್ಕೂ ಅಧಿಕ ಜನ ಪ್ರತಿ ದಿನ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಓಡಾಟ ನಡೆಸುತ್ತಾರೆ. ಕರೊನಾ ಕಾಲಘಟ್ಟದಲ್ಲಿ ಪ್ರಯಾಣಿಕರ ಕೊರತೆ ಹಾಗೂ ಸರ್ಕಾರದ ನಿರ್ಬಂಧದ ನಡುವೆಯೂ ಸರಾಸರಿ ಶೇ. 60 ರಷ್ಟು ಜನ ಬಸ್ಗಳಲ್ಲಿ ಓಡಾಟ ನಡೆಸಿದ್ದರು. ಈ ವರ್ಷ ಜನವರಿಯಿಂದ ಮಾರ್ಚ್ವರೆಗೆ ದಿನಕ್ಕೆ ಸರಾಸರಿ 50 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಎರಡು ದಿನದಿಂದ ಸಂಪೂರ್ಣ ಆದಾಯ ನಿಂತು ಹೋಗಿದೆ.
ಹಾಜರಾತಿ ಇಳಿಕೆ: ಬಸ್ಗಳು ಬಂದಾಗಿದ್ದರಿಂದ ಪದವಿ ಪೂರ್ವ ಕಾಲೇಜ್ಗಳಲ್ಲಿ ಶೇ. 40 ರಷ್ಟು ಹಾಜರಾತಿ ಇಳಿಕೆಯಾಗಿದೆ. ವಾಣಿಜ್ಯ ಹಾಗೂ ಕಲಾ ವಿಭಾಗಗಳಿಗೆ ಗ್ರಾಮೀಣ ಭಾಗದಿಂದ ಬರುವ ಸಾಕಷ್ಟು ವಿದ್ಯಾರ್ಥಿಗಳಿದ್ದು, ಅವರೆಲ್ಲರೂ. ಎರಡು ದಿನದಿಂದ ಕಾಲೇಜ್ಗೆ ಬಂದಿಲ್ಲ ಎನ್ನುತ್ತಾರೆ ಶಿರಸಿ ಮಾರಿಕಾಂಬಾ ಪಿಯು ಕಾಲೇಜ್ನ ಪ್ರಾಂಶುಪಾಲ ಬಾಲಚಂದ್ರ ಭಟ್.
ಹೆಚ್ಚಿದ ಖಾಸಗಿ ವಾಹನ: ಖಾಸಗಿ ವಾಹನ ಓಡಾಟ ಎರಡನೇ ದಿನ ಇನ್ನಷ್ಟು ಹೆಚ್ಚಿದೆ. ಕಾರವಾರ, ಶಿರಸಿ, ಕುಮಟಾ ಭಾಗದಲ್ಲಿ ಕೆಲ ಗ್ರಾಮೀಣ ಭಾಗಗಳಲ್ಲೂ ಟೆಂಪೋ ಓಡಾಟ ಪ್ರಾರಂಭವಾಗಿದೆ. ಖಾಸಗಿ ವಾಹನಗಳ ಮೇಲೆ ಅಸುರಕ್ಷಿತವಾಗಿ ಪ್ರಯಾಣಿಕರನ್ನು ಕೊಂಡೊಯ್ಯುವುದು ಕಂಡುಬರುತ್ತಿದೆ.
ಗ್ರಾಮೀಣಕ್ಕಿಲ್ಲ ಖಾಸಗಿ ವಾಹನ ವ್ಯವಸ್ಥೆ: ಸಿದ್ದಾಪುರ: ಸರ್ಕಾರಿ ಬಸ್ ಸಂಚಾರ ಬಂದಾಗಿದ್ದರಿಂದ ಜನತೆಯ ಸಂಕಷ್ಟ ಕೇಳುವವರಿಲ್ಲದಂತಾಗಿದೆ. ಬಸ್ ಸಂಚಾರ ಇಲ್ಲದ್ದರಿಂದ ಸಿದ್ದಾಪುರದಿಂದ ಸಾಗರ, ಕುಮಟಾ, ಶಿರಸಿಗೆ ಮಾತ್ರ ಕೆಲವು ಖಾಸಗಿ ಬಸ್ ಸಂಚಾರ ಮಾಡಿದ್ದರೆ ಗ್ರಾಮೀಣ ಭಾಗದಲ್ಲೂ ಯಾವ ವ್ಯವಸ್ಥೆಯೂ ಇರಲಿಲ್ಲ. ಗ್ರಾಮೀಣ ಪ್ರದೇಶದ ಕೆಲವು ಖಾಸಗಿ ವಾಹನದವರು ಮಾತ್ರ ಪಟ್ಟಣದತ್ತ ಸಾಗಿದ್ದರಿಂದ ಪಟ್ಟಣದಲ್ಲಿ ಜನ ಸಂಚಾರ ಕಡಿಮೆ ಇತ್ತು.
ಜಿಲ್ಲೆಯ ಶಿರಸಿ ವಿಭಾಗಕ್ಕೆ ಸಂಬಂಧಿಸಿದಂತೆ ಎರಡು ದಿನದಿಂದ ಒಂದೂ ಬಸ್ ಓಡಾಡಿಲ್ಲ. ಖಾಸಗಿ ಬಸ್ ಹಾಗೂ ಇತರ ವಾಹನಗಳಿಗೆ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಅವಕಾಶ ನೀಡಲಾಗಿದೆ. | ರಾಜಕುಮಾರ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ