ಶಿರಸಿ: ಶಿರಸಿ- ಕುಮಟಾ ರಸ್ತೆ ವಿಸ್ತರಣೆ ಸಂಬಂಧ ಮರ ಕಟಾವು ಪ್ರಕ್ರಿಯೆಗೆ ಎದುರಾದ ವಿಘ್ನವನ್ನು ತಕ್ಷಣ ನಿವಾರಿಸಿ ಕಾಮಗಾರಿಗೆ ಅನುವು ಮಾಡಿ ಕೊಡುವಂತೆ ಒತ್ತಾಯಿಸಿ ಸಾರ್ವಜನಿಕರು ಹೆದ್ದಾರಿ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಿಸಿದ ಘಟನೆ ತಾಲೂಕಿನ ಅಮ್ಮಿನಳ್ಳಿಯಲ್ಲಿ ನಡೆದಿದೆ.
ಶಿರಸಿ- ಕುಮಟಾ ರಸ್ತೆ ಅಭಿವೃದ್ಧಿ ವೇದಿಕೆ, ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಅಮ್ಮಿನಳ್ಳಿಯಲ್ಲಿ ಸಂಚಾರ ತಡೆದು ಹಕ್ಕೊತ್ತಾಯ ಮಾಡಿದರು.
ಈ ವೇಳೆ ವೇದಿಕೆ ಮುಖ್ಯಸ್ಥ ಸುಬ್ರಹ್ಮಣ್ಯ ಹೆಗಡೆ ಮಾತನಾಡಿ, ಉತ್ತರಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸದಾ ಅಡ್ಡಗಾಲು ಹಾಕುವವರು ಡೋಂಗಿ ಪರಿಸರವಾದಿಗಳಾಗಿದ್ದಾರೆ. ಅಂಥ ಪರಿಸರ ವ್ಯಾಧಿಗಳು ಮೂಲಸೌಲಭ್ಯದಂಥ ಕಾಮಗಾರಿಗೂ ತೊಡಕಾಗುತ್ತಿರುವುದು ಖಂಡನೀಯ. ಜನರು ಇಂಥ ಸ್ವಹಿತಾಸಕ್ತಿಯ ಪರಿಸರವಾದಿಗಳಿಂದ ದೂರ ಉಳಿದು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ರಸ್ತೆ ವಿಸ್ತರಣೆ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳ್ಳಲು ಆರಂಭಿಕ ಹಂತವಾದ ಮರ ಕಟಾವು ಪ್ರಕ್ರಿಯೆಗೆ ಚಾಲನೆ ಸಿಗಬೇಕು. ಹಾಗಾಗಿ ಶೀಘ್ರದಲ್ಲಿ ಎದುರಾದ ವಿಘ್ನವನ್ನು ತೊಡೆದು ಹಾಕಿ ಕಾಮಗಾರಿ ನಡೆಸಬೇಕು. ಅದರಿಂದ ಸಾಮಾನ್ಯ ಜನರು, ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸಬಹುದು ಎಂದರು.
ಗಂಟೆಗೂ ಹೆಚ್ಚು ಸಮಯ ಪ್ರತಿಭಟಿಸಿದ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸರಿಯಾದ ಸ್ಪಷ್ಟನೆ ನೀಡುವವರೆಗೂ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಕೋರ್ಟ್ ಸೂಚನೆ ಪಾಲಿಸಲಾಗುವುದು. ಜತೆಗೆ ತ್ವರಿತವಾಗಿ ಕಾಮಗಾರಿ ನಡೆಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಸಂಚಾರಕ್ಕೆ ಅವಕಾಶ ನೀಡಲಾಯಿತು. ಸಂಚಾರ ತಡೆದಿದ್ದರಿಂದ ಕೆಲ ಸಮಯ ವಾಹನ ಸವಾರರು ಪರದಾಡಿದರು.
ಈ ವೇಳೆ ನಾಗರಾಜ ಮಡಿವಾಳ, ರಘು ಕಾನಡೆ, ಪರಮಾನಂದ ಹೆಗಡೆ, ಶ್ರೀಧರ ಹೆಗಡೆ, ಎಂ.ಎಂ. ಭಟ್ಟ, ಗಣಪತಿ ನಾಯ್ಕ, ರಾಕೇಶ ತಿರುಮಲೆ, ದೇವರಾಜ ಮರಾಠಿ, ಕುಮಾರ ಜೋಶಿ, ಶ್ರೀಪಾದ ಹೆಗಡೆ, ಪ್ರವೀಣ ಗೌಡರ, ರಮೇಶ ಆಚಾರಿ, ಗಣೇಶ ದಾವಣಗೆರೆ, ವಿನಾಯಕ ಹೆಗಡೆ, ಇಬ್ರಾಹಿಂಸಾಬ್, ನವೀನ ನಾಯ್ಕ ಇತರರಿದ್ದರು.