ಜಿಲ್ಲೆ

ಶಿಬಿರದ ಮೂಲಕ ಗಮನಸೆಳೆದ ಶಾಕ್ಯ ಕಲಾಸಂಘ

ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿ ಅಜಂತ ಟ್ರಸ್ಟ್, ಶಾಕ್ಯ ನಾಟ್ಯ ಕಲಾಸಂಘ, ರಾಜ್ಗುರು ಫೌಂಡೇಶನ್ ಸಹಯೋಗದಲ್ಲಿ ಏ.15 ರಿಂದ ನಡೆಯುತ್ತಿರುವ ಬೇಸಿಗೆ ಶಿಬಿರ ಗಮನಸೆಳೆಯುತ್ತಿದೆ.

ಸಂತೇಮರಹಳ್ಳಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಕ್ಕಳ ಬೇಸಿಗೆ ರಂಗ ಶಿಬಿರದಲ್ಲಿ 20 ಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಹಿರಿಯ ಸಂಪನ್ಮೂಲ ವ್ಯಕ್ತಿಗಳಿಂದ ನಿತ್ಯವೂ ಕರಾಟೆ, ನಾಟಕ, ಚಿತ್ರಕಲೆ, ಜನಪದಗೀತೆ, ನೃತ್ಯ ಹಾಗೂ ಇನ್ನಿತರೆ ವಿಚಾರಗಳ ಕುರಿತು ತರಬೇತಿಯನ್ನು ನೀಡುತ್ತಿದ್ದಾರೆ. ಶಿಬಿರದಲ್ಲಿ ಮಕ್ಕಳ ಸಂತೆ, ಗ್ರಾಮೀಣ ಕ್ರೀಡೆಗಳು, ಪರಿಸರ ನಡಿಗೆ ಮತ್ತು ಇನ್ನಿತರೆ ಮನರಂಜನಾ ಕಾರ್ಯಕ್ರಮಗಳನ್ನು ಯೋಜಿಸುವ ಮೂಲಕ ಮಕ್ಕಳಿಗೆ ಸೃಜನಾತ್ಮಕ ಕಲಿಕೆಯನ್ನು ನೀಡಲಾಗುತ್ತಿದೆ.

ಪ್ರಸ್ತುತ ಸಂದರ್ಭದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡೆಗಳಲ್ಲಿ ಮಕ್ಕಳಿಗೆ ವಿುಲವಾದ ಅವಕಾಶಗಳು ಇದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ಸೂಕ್ತ ತರಬೇತಿ ಇಲ್ಲದೇ ಇದರಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಕಲೆ, ಸಾಹಿತ್ಯ, ನಾಟಕ ಅಭಿನಯ ಹಾಗೂ ಇನ್ನಿತರೆ ವಿಷಯಗಳ ಕುರಿತು ಶಿಬಿರದಲ್ಲಿ ಮಕ್ಕಳಿಗೆ ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತಿದೆ.

ಸಂಪನ್ಮೂಲ ವ್ಯಕ್ತಿಗಳಾದ ರಾಜಗುರು ನಾಗೇಂದ್ರ, ಕಾಳಿಂಗಸ್ವಾಮಿ ಸಿದ್ಧಾರ್ಥ, ರವಿತೇಜ, ಮಿಮಿಕ್ರಿ ಮಲ್ಲಣ್ಣ, ಸ್ನೇಕ್ ಮಂಜು, ಕೃಷ್ಣಮೂರ್ತಿ ಚಂಗಚಳ್ಳಿ, ಎಂ.ಆರ್.ಪ್ರಭಾವತಿ, ಎಂ.ಮಹೇಶ್ ಕುಮಾರ್, ರಾಜಶೇಖರ್(ಕಿಚ್ಚ) ಹಾಗೂ ಸುಜಾತಾ ರಮೇಶ್ ಅವರು ಮಕ್ಕಳಿಗೆ ಅಗತ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ಹೆಚ್ಚಾಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೇ 13 ರಂದು ಸಮಾರೋಪ:

ಅಜಂತ ಟ್ರಸ್ಟ್ ಮತ್ತು ಶಾಕ್ಯನಾಟ್ಯ ಕಲಾಸಂಘದ ವತಿಯಿಂದ ನಡೆಯುತ್ತಿರುವ ಮಕ್ಕಳಬೇಸಿಗೆ ರಂಘ ಶಿಬಿರದ ಸಮಾರೋಪ ಸಮಾರಂಭವನ್ನು ಮೇ 13 ರಂದು ಆಯೋಜಿಸಲಾಗಿದೆ. ಸಂತೇಮರಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂಜೆ 4 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸುವರು. ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಮುಖಂಡ ಬಿ.ಜಯಸುಂದರ್, ಪಿ.ವೃಷಭೇಂದ್ರಪ್ಪ, ಕಿನಕಳ್ಳಿ ರಾಚಯ್ಯ, ಮಂಜುಳಾ ಕೃಷ್ಣಮೂರ್ತಿ, ಚನ್ನಬಸವಯ್ಯ, ಮಹೇಶ್ ಕುಮಾರ್, ಈಶ, ಎಂ.ಪಿ.ಶಂಕರ್, ಎನ್.ಲೊಕೇಶ್, ಬಾಗಳಿ ರೇವಣ್ಣ, ಗೋವಿಂದಯ್ಯ ರಮೇಶ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಕ್ಕಳಿಂದಲೇ ನಾಟಕ ಪ್ರದರ್ಶನ:

ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಕಮರವಾಡಿ ಮಹದೇವಸ್ವಾಮಿ ಅವರು ಶಿಬಿರದ ಮಕ್ಕಳಿಗೆ ‘ಬುದ್ಧ ಚರಿತ’ ಎಂಬ ನಾಟಕವನ್ನು ತರಬೇತಿಯನ್ನು ನೀಡಿದ್ದು, ಸಮಾರೋಪ ಸಮಾರಂಭದಲ್ಲಿ ಮಕ್ಕಳೇ ನಾಟಕ ಪ್ರದರ್ಶನ ಮಾಡಲಿದ್ದಾರೆ. ಇದೇ ವೇಳೆ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ವಕೀಲರಾದ ಉಮೇಶ್, ಪತ್ರಕರ್ತ ಶಿವಕುಮಾರ್ ಬೆಳ್ಳಿತಟ್ಟೆ, ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ಸಿ.ಎನ್.ರೇಣುಕಾದೇವಿ, ರಂಗಕರ್ಮಿ ಎಂ.ಪಿ.ರಾಜು, ಪಿಡಿಓ ಮಮತಾ, ಪಿಎಸ್‌ಐ ಚಂದ್ರಶೇಖರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಿದ್ದಾರೆ.