ಜಿಲ್ಲೆ

ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಕಟ್ಟಡಗಳು

ಚಾಮರಾಜನಗರ: ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿರುವ ಕೆಲವು ಸರ್ಕಾರಿ ಕಟ್ಟಡಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾಯ ಸಂಭವಿಸಬಹುದಾದ ಭೀತಿ ಉಂಟಾಗಿದೆ.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿರುವ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಅದರ ಸಮೀಪದಲ್ಲೇ ಇರುವ ಬಿಇಓ ಹಳೆಯ ಕಚೇರಿ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮತ್ತಷ್ಟು ಶಿಥಿಲಗೊಂಡಿದೆ. ಈ ಆವರಣದಲ್ಲೇ ಬಿಇಓ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಜಿಲ್ಲಾ ಸಮನ್ವಯಾಧಿಕಾರಿಗಳ ಕಚೇರಿ, ಆದರ್ಶ ವಿದ್ಯಾಲಯ, ಮಹಿಳಾ ವಿದ್ಯಾರ್ಥಿ ನಿಲಯ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಕಟ್ಟಡಗಳು ಇರುವುದರಿಂದ ನಿತ್ಯವೂ ಈ ಕಟ್ಟಡಗಳ ಸಮೀಪದಲ್ಲೇ ನೂರಾರು ಸಾರ್ವಜನಿಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಡೆದುಕೊಂಡು ಅಥವಾ ವಾಹನಗಳಲ್ಲಿ ಸಂಚಾರ ಮಾಡುತ್ತಾರೆ.

ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಕುಸಿದುಬೀಳುವ ಹಂತಕ್ಕೆ ತಲುಪಿದೆ. ಹಲವಾರು ವರ್ಷಗಳಿಂದಲೂ ಈ ಕಟ್ಟಡಗಳು ಇದೇ ರೀತಿಯಲ್ಲಿ ನಿಂತಿದ್ದು, ಮಳೆಗಾಲದಲ್ಲಿ ಯಾವುದಾದರೂ ಅನಾಹುತ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡಗಳನ್ನು ದುರಸ್ಥಿಗೊಳಿಸಬೇಕು. ಇಲ್ಲವೇ ಕಟ್ಟಡಗಳನ್ನು ಕೆಡವಿ ಯಾವುದೇ ಅನಾಹುತ ಸಂಭವಿಸದಂತೆ ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕುಸಿಯುವ ಭೀತಿಯಲ್ಲಿ ಕಟ್ಟಡ:

ಬಿಇಓ ಕಚೇರಿಯ ಆವರಣದಲ್ಲಿರುವ ಕ್ಷೇತ್ರಾಶಿಕ್ಷಣಾಧಿಕಾರಿಗಳ ಹಳೆಯ ಕಟ್ಟಡ ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿದೆ. ಕಟ್ಟಡದ ಮೇಲ್ಛಾವಣಿಯ ಮೇಲೆ ನೀರು ನಿಲ್ಲುತ್ತಿದ್ದ ಪರಿಣಾಮವಾಗಿ ಈ ಸ್ಥಿತಿಗೆ ಬಂದು ತಲುಪಿದೆ. ಕಟ್ಟಡದ ಕಿಟಕಿಯ ಗಾಜುಗಳು ಹೊಡೆದುಹೋಗಿದ್ದು, ಸುತ್ತಲೂ ಗೋಡೆಗಳು ಬಿರುಕು ಬಿಟ್ಟಿದೆ. ಗೋಡೆಗಳ ಸುತ್ತಲೂ ಪಾಚಿ ಮತ್ತು ಗಿಡಗೆಂಟಿಗಳು ಬೆಳೆದುಕೊಂಡು ಹಾಳಾಗಿದೆ. ಕಟ್ಟಡದ ಒಳಭಾಗದಲ್ಲಿ ಪಾಲು ಬಿದ್ದಿರುವ ಸ್ಥಿತಿ ನಿರ್ಮಾಣವಾಗಿದೆ. ಈ ಕಟ್ಟಡದ ಸಮೀಪದಲ್ಲೇ ಒಣಗಿದ ಬೃಹತ್ ಮರವೊಂದು ಇದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾಯ ಸಂಭವಿಸಬಹುದಾಗಿದೆ. ತಾಲೂಕಿನ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ನಿತ್ಯವೂ ಇದರ ಸಮೀಪದಲ್ಲೇ ಸಂಚಾರ ಮಾಡಿದರೂ, ಯಾರು ಇತ್ತ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಛಾವಣಿ ಕುಸಿಯುವ ಹಂತದಲ್ಲಿದೆ:

ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡದ ಛಾವಣಿ ಕುಸಿಯುವ ಹಂತದಲ್ಲಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಟ್ಟಡದ ಗೋಡೆಗಳು ತೇವಗಾಗಿದ್ದು, ಒಳಭಾಗದಲ್ಲಿ ಸೋರುತ್ತಿದೆ. ಕಟ್ಟಡವನ್ನು ಪ್ರವೇಶ ಮಾಡುತ್ತಿದ್ದಂತೆಯೇ ಮೇಲ್ಛಾವಣಿ ಕುಸಿಯುವ ಹಂತದಲ್ಲಿರುವುದು ತಿಳಿಯುತ್ತದೆ. ಗೋಡೆಗಳು ಪಾಚಿ ಕಟ್ಟಿದ್ದು, ಗಿಡಗಳು ಬೆಳೆದುಕೊಂಡಿದೆ. ಕಟ್ಟಡದ ಸುತ್ತಲೂ ಅವ್ಯವಸ್ಥೆ ತಾಂಡವವಾಡುತ್ತಿದೆ. ಈ ಕಟ್ಟಡವೂ ಸಂಪೂರ್ಣ ಹಳೆಯ ಕಟ್ಟಡವಾಗಿದ್ದು, ಯಾವುದಾದರೂ ಅಪಾಯ ಸಂಭವಿಸಬಹುದಾದ ಸಾಧ್ಯತೆಗಳಿವೆ. ಹಲವಾರು ವರ್ಷಗಳಿಂದ ಈ ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು, ಪರ್ಯಾ ವ್ಯವಸ್ಥೆಯನ್ನು ಮಾಡುವಲ್ಲಿ ಅಧಿಕಾರಿವರ್ಗ ಸಂಪೂರ್ಣ ವಿಲವಾಗಿದೆ ಎಂಬ ದೂರುಗಳು ಕೇಳಿ ಬರುತ್ತಿದೆ.

ಬಿಇಓ ಕಚೇರಿಯ ಆವರಣದಲ್ಲಿರುವ ಹಳೆಯ ಬಿಇಓ ಕಚೇರಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಗಳು ಸಂಪೂರ್ಣ ಶಿಥಿಲಾವಸ್ಥೆಯನ್ನು ತಲುಪಿದ್ದು ಅಧಿಕಾರಿಗಳು ಈ ವರೆಗೂ ಯಾವುದೇ ಪರ್ಯಾ ವ್ಯವಸ್ಥೆ ಮಾಡಿಲ್ಲ. ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡದ ಛಾವಣಿ ಕುಸಿಯುವ ಹಂತಕ್ಕೆ ತಲುಪಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕ್ರಮವಹಿಸಬೇಕು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಮತ್ತು ಸಿಇಓ ಮೋನಾರೋತ್ ಅವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಈ ಕಟ್ಟಡಗಳ ತೆರವಿಗೂ ಒತ್ತು ನೀಡಬೇಕು.

ಪರಶಿವಮೂರ್ತಿ, ಯುವಮುಖಂಡ, ಚಾಮರಾಜನಗರ

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸ್ಥಳಾಂತರ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪ್ರಸ್ತುತ ಡಯಟ್ ಕಚೇರಿಯಲ್ಲಿ ಕೊಠಡಿ ನೀಡುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಚೇರಿ ಸ್ಥಳಾಂತರ ಮಾಡುತ್ತೇವೆ.

ಬಸವರಾಜು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಚಾಮರಾಜನಗರ

ಈ ಹಿಂದೆ ಬಿಇಓ ಕಚೇರಿ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡವನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದೆ. ಸುಮಾರು ಆರು ತಿಂಗಳ ಹಿಂದೆಯೇ ಪತ್ರ ಬರೆದಿದ್ದು, ಯಾವುದೇ ಕ್ರಮವಾಗಿಲ್ಲ. ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೂ ಅನುದಾನವನ್ನು ಕೋರಿ ಪತ್ರಬರೆಯಲಾಗಿದೆ.

ಹನುಮಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ, ಚಾಮರಾಜನಗರ