ಬೇಲೂರು: ಬೇಲೂರು ಪಟ್ಟಣದಲ್ಲಿ ಯಗಚಿ ನದಿಗೆ ಅಡ್ಡಲಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿರುವ 150ಕ್ಕೂ ಹೆಚ್ಚು ಹಳೆಯದಾದ ಇತಿಹಾಸ ಪ್ರಸಿದ್ಧ ಅಪರೂಪ ಕಲ್ಲಿನ ಕಮಾನಿನ ಆಕಾರದ ಸೇತುವೆ ದಿನದಿಂದ ದಿನಕ್ಕೆ ಅವನತಿಯತ್ತ ಸಾಗುತಿದ್ದು, ಸಂಬಂಧಿಸಿದವರು ಈ ಸೇತುವೆಯನ್ನು ಉಳಿಸಲು ಮುಂದಾಗಬೇಕಿದೆ.
ಈ ಹಿಂದೆ ಬೇಲೂರು ಪಟ್ಟಣದೊಳಗೆ ಆಗಮಿಸಬೇಕೆಂದರೆ ನದಿಯನ್ನು ದಾಟಿ ಬರಬೇಕಿತ್ತು. ಇದನ್ನು ಅರಿತು ಅಂದು ಸೇತುವೆಯನ್ನು ಸಂಪೂರ್ಣ ಕಲ್ಲುಗಳಿಂದಲೇ ಕಟ್ಟಲಾಯಿತು. ಬೇಲೂರು ಪಟ್ಟಣ ಪ್ರವೇಶಿಸಲು ಒಂದೇ ಸೇತುವೆ ಇದ್ದುದ್ದರಿಂದ ಎಲ್ಲ ವಾಹನಗಳು ಇದೇ ಸೇತುವೆ ಮೇಲೆ ತೆರಳುತ್ತಿದ್ದು, ಪರಿಣಾಮ ಅಲ್ಪಸ್ವಲ್ಪ ಶಿಥಿಲಗೊಂಡಿತ್ತು. ಆದರೆ ದಿನ ಕಳೆದಂತೆ ಸೇತುವೆ ಮೇಲೆಲ್ಲ ಗಿಡಗಂಟಿಗಳು ದೊಡ್ಡದಾಗಿ ಬೆಳೆದ ಪರಿಣಾಮ ಮತ್ತಷ್ಟು ಶಿಥಿಲಾವಸ್ಥೆ ತಲುಪಿದೆ.
ಸೇತುವೆಗೆ ಹಾಕಿರುವ ತಳಪಾಯದ ಪಿಲ್ಲರ್‌ಗಳು ಮತ್ತು ತಡೆಗಾಗಿ ನಿರ್ಮಿಸಿರುವ ಸಿಮೆಂಟ್ ತಡೆಗೋಡೆಗಳು ಉದುರುತ್ತಿವೆ. ಮಳೆ ಹೆಚ್ಚಾಗಿ ನದಿಗೆ ಹೆಚ್ಚು ನೀರು ಬಿಟ್ಟಾಗ ನೀರಿನ ರಭಸಕ್ಕೆ ಮತ್ತಷ್ಟು ತಳಪಾಯದ ಕಲ್ಲುಗಳು ಉದುರುವುದು ಮತ್ತು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಈ ಹಳೆಯದಾದ ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲಿನ ಕಮಾನು ಆಕಾರದ ಸೇತುವೆಯನ್ನು ಆದಷ್ಟು ಬೇಗ ಗುಣಮಟ್ಟದಲ್ಲಿ ದುರಸ್ತಿಗೊಳಿಸಿ ಮುಂದಿನ ಪೀಳಿಗೆಗೆ ಉಳಿಸುವ ಮೂಲಕ ಅದನ್ನು ನೆನಪಿನ ಸ್ಮಾರಕವನ್ನಾಗಿ ಮಾಡುವತ್ತ ಸಂಬಂಧಿಸಿದವರು ಮುಂದಾಗಬೇಕಿದೆ ಎಂದು ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಂಡರು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಬೇಲೂರು ಪಟ್ಟಣದಲ್ಲಿ ಹಾದು ಹೋಗಿರುವ ಯಗಚಿ ಹಳೇ ಸೇತುವೆ ಶಿಥಿವಾಗಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಆ ಬಳಿಕ ಮೇಲಧಿಕಾರಿಗಳ ಗಮನಕ್ಕೆ ತಂದು ದುರಸ್ತಿಗೆ ಗತ್ಯ ಕ್ರಮ ಕೈಗೊಳ್ಳಲಾಗುವುದು.
ಚಿಂತಾಮಣಿ ಕಾಂಬ್ಳೆ ಸಾಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ರಸ್ತೆ ಉಪ ವಿಭಾಗ
ಹದಿನೈದು ವರ್ಷಗಳಿಂದ ಹೋರಾಟ
ಹಳೇ ಯಗಚಿ ಸೇತುವೆ ಉಳಿವಿಗಾಗಿ ಹದಿನೈದು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದ್ದು, ಸಣ್ಣಪುಟ್ಟ ದುರಸ್ತಿ ಮಾಡಲಾಗುತ್ತಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ಅಗತ್ಯ ಕ್ರಮ ಕೈಗೊಂಡಿಲ್ಲ. ಈ ಸೇತುವೆಯನ್ನು ನಮ್ಮ ಸಂಘಟನೆಗೆ ವಹಿಸಿದರೆ ಸಂಘಟನೆ ಅಧ್ಯಕ್ಷ ಟಿ.ಎ.ನಾರಾಯಣಗೌಡರ ಹೆಸರಿಟ್ಟು ಸೇತುವೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಿಸುವುದರ ಜತೆಗೆ ಅದರ ನಿರ್ವಹಣೆಯ ಜವಾಬ್ದಾರಿ ಹೊರುತ್ತೇವೆ.
ಚಂದ್ರಶೇಖರ್ ತಾಲೂಕು ಅಧ್ಯಕ್ಷ, ಕರವೇ (ನಾರಾಯಣಗೌಡ) ಬಣ ಬೇಲೂರು
ಮಕ್ಕಳು, ಮೊಮ್ಮಕ್ಕಳೂ ನೋಡುವಂತಾಗಬೇಕು
ಇದೊಂದು ಅಪರೂಪದ ಕಲ್ಲಿನ ಕಮಾನಿನಾಕಾರದ ಸೇತುವೆ. ಹಿಂದೆ ಮಳೆ ಬಂದ ಸಂದರ್ಭ ಈ ಸೇತುವೆಯೊಳಗೆ ನೀರು ಹರಿಯುವುದನ್ನು ನೋಡಲು ಸಂತೋಷ ಆಗುತ್ತಿತ್ತು. ಆದರೆ ಈಗ ಈ ಸೇತುವೆ ಇಷ್ಟೊಂದು ಶಿಥಿಲಾವಸ್ಥೆ ತಲುಪಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಇದನ್ನು ದುರಸ್ತಿ ಮಾಡಿಸಿ ನಮ್ಮ ಮಕ್ಕಳು, ಮೊಮ್ಮಕ್ಕಳೂ ನೋಡುವಂತಾಗಬೇಕು.
ಮಂಜು ಮೊಗಸಾವರ, ಉಪಾಧ್ಯಕ್ಷ ಗಾಂಧಾರ ಬುದ್ಧ ವಿಹಾರ ಮದಘಟ್ಟ
ಬೇಲೂರಿಗೆ ಒಂದು ಸ್ಮಾರಕವಿದ್ದಂತೆ
ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಸೇತುವೆ ನೋಡಲು ಒಂದು ರೀತಿಯಲ್ಲಿ ಸುದೈವ ಎನ್ನಬೇಕು. ಹಿಂದೆಯೇ ಅಷ್ಟೊಂದು ಅಚ್ಚುಕಟ್ಟಾಗಿ, ಸುಂದರವಾಗಿ ಕಲ್ಲಿನಿಂದಲೇ ಸೇತುವೆ ನಿರ್ಮಿಸಿರುವುದು ಶ್ಲಾಘನೀಯ. ಆದರೆ ಈಗ ಕಲ್ಲಿನ ಸೇತುವೆಯ ತಳಪಾಯದ ಕಲ್ಲುಗಳೆಲ್ಲ ಉದುರುತ್ತಿರುವುದು ಕೇಳಿ ಬೇಸರವಾಗಿದೆ. ಇದು ಬೇಲೂರಿಗೆ ಒಂದು ಸ್ಮಾರಕವಿದ್ದಂತೆ. ಇದನ್ನು ಉಳಿಸಲು ಅಧಿಕಾರಿಗಳು ಮುಂದಾಗಬೇಕಿದೆ.
ಸಿ.ಎಚ್.ಲೋಕೇಶ್, ಖಜಾಂಚಿ, ಯುನೈಟೆಡ್ ಅಕಾಡೆಮಿ ವಿದ್ಯಾಸಂಸ್ಥೆ ನಿಡಗೋಡು
ಗಿಡಗಂಟಿ ಶಾಶ್ವತವಾಗಿ ಬೆಳೆಯದಿರಲಿ
ಯಗಚಿ ಸೇತುವೆ ಮೇಲೆ ನಿತ್ಯ ಓಡಾಡುತ್ತೇವೆ. ಆದರೆ ಈ ಸೇತುವೆ ಮೇಲೆಲ್ಲ ಗಿಡಗಂಟಿಗಳು ಬೆಳೆದಿದ್ದು, ಇದೀಗ ಶಿಥಿಲವಾಗಿದೆ. ಗಿಡಗಳನ್ನು ಕತ್ತರಿಸಿದರೆ ಸಾಲದು. ಬದಲಾಗಿ ಗಿಡಗಳು ಪುನಃ ಬೆಳೆಯದಂತೆ ಶಾಶ್ವತವಾಗಿ ನಾಶಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಸೇತುವೆಯನ್ನು ದುರಸ್ತಿಗೊಳಿಸಿ ಮುಂದಿನ ಪೀಳಿಗೆಗೆ ಈ ಸೇತುವೆಯ ಪರಿಚಯ ಮಾಡಿಕೊಡಬೇಕು.
ಗಂಗಾಧರ್ ಭೌದ್ ಕೃಷಿಕ, ಜೆ.ಸೂರಾಪುರ
ಅಧಿಕಾರಿಗಳಿಗೇಕೆ ಇದು ಕಾಣುತ್ತಿಲ್ಲ?
ಇತಿಹಾಸ ಪ್ರಸಿದ್ಧ ಯಗಚಿ ಸೇತುವೆ ನಿರ್ವಹಣೆ ಮಾಡುವ ಇಲಾಖೆ ಅಧಿಕಾರಿಗಳಿಗೆ ತಳಪಾಯ ಶಿಥಿಲವಾಗಿರುವುದು ಕಾಣುತ್ತಿಲ್ಲವೇ? ಇದೇ ರಸ್ತೆಯಲ್ಲಿ ಓಡಾಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇಂತಹ ಸೇತುವೆ ಉಳಿಸಿಕೊಳ್ಳುವುದಕ್ಕಿಂತ ಬೇರೆ ಯಾವ ಕಾರ್ಯವಿದೆ ಎಂದು ತಿಳಿಯುತ್ತಿಲ್ಲ. ಆದಷ್ಟು ಬೇಗ ಸೇತುವೆ ದುರಸ್ತಿ ಮಾಡಿಸಿದರೆ ಇನ್ನಷ್ಟು ದಿನ ಸಣ್ಣಪುಟ್ಟ ವಾಹನಗಳಾದರೂ ಓಡಾಡಲು ಅನುಕೂಲ.
ಚಂದನ್ ಹಿರೀಕೊಲೆ ಗ್ರಾಮಸ್ಥ
ಇನ್ನಷ್ಟು ವರ್ಷ ನೋಡುವಂತಾಗಲಿ
ಸಂಘ ಸಂಸ್ಥೆಯವರು ಪ್ರತಿಭಟನೆ ನಡೆಸಿ ಯಗಚಿ ಸೇತುವೆ ಉಳಿಸಿ ಎಂದು ಹೋರಾಟ ಮಾಡಿದಾಗ ಅಧಿಕಾರಿಗಳು ಸಣ್ಣಪುಟ್ಟ ದುರಸ್ತಿಗೆ ಮುಂದಾಗುತ್ತಾರೆ. ಇತಿಹಾಸದ ಪುಟದಲ್ಲಿ ಉತ್ತಮ ಸೇತುವೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಈ ಸೇತುವೆಯನ್ನು ಉಳಿಸುವುದಕ್ಕೆ ಸದಾ ಸಿದ್ಧರಿರಬೇಕು. ಮಳೆಗಾಲದ ಸಂದರ್ಭ ತಳಪಾಯ ಕೊಚ್ಚಿ ಹೋಗದಂತೆ ತಕ್ಷಣವೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಈ ಸೇತಯವೆಯನ್ನು ಇನ್ನಷ್ಟು ವರ್ಷ ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ.
ಲಕ್ಷ್ಮೀ ಮಲ್ಲೇಶ್, ಗೃಹಿಣಿ ಬೇಲೂರು
ಕ್ರಮ ವಹಿಸದಿದ್ದರೆ ಹೋರಾಟ ಅನಿವಾರ್ಯ
ಆಗೊಮ್ಮೆ-ಹೀಗೊಮ್ಮೆ ಸೇತುವೆ ಮೇಲಿನ ಗಿಡಗಂಟಿಗಳನ್ನು ತೆಗೆಸುವ ಬದಲು ಅದು ಬೆಳೆಯದಂತೆ ಬೇರು ಸಹಿತ ತೆಗೆದರೆ ಸೇತುವೆಯ ಕಲ್ಲುಗಳೂ ಗಟ್ಟಿಯಾಗಿರುತ್ತವೆ. ಅದೇ ರೀತಿ ತಳಪಾಯದಲ್ಲೂ ಕಲ್ಲುಗಳು ಉದುರುತ್ತಿದ್ದು, ಅದನ್ನು ಮತ್ತೆ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವತ್ತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು. ಇಲ್ಲದಿದ್ದಲ್ಲಿ ಯಗಚಿ ಹಳೇ ಸೇತುವೆ ಉಳಿಸಿ ಎಂಬ ಹೆಸರಲ್ಲಿ ಹೋರಾಟ ಅನಿವಾರ್ಯ.
ಮಲ್ಲಿಕಾರ್ಜುನ್ ಗ್ರಾಪಂ ಉಪಾಧ್ಯಕ್ಷ, ನಾರ್ವೆ
ಕುಸಿದ ನಂತರ ಯೋಚನೆ ಸರಿಯಲ್ಲ
ಈಗಿರುವ ಯಗಚಿ ಸೇತುವೆಯನ್ನು ದುರಸ್ತಿಪಡಿಸಿ ಉಳಿಸಿಕೊಳ್ಳುವುದು ಒಳಿತು. ಇಲ್ಲದಿದ್ದರೆ ಕುಸಿದ ನಂತರ ಸೇತುವೆ ಉರುಳಿತು ಎನ್ನುವುದು ಎಷ್ಟು ಸರಿ. ಆದ್ದರಿಂದ ಉತ್ತಮವಾಗಿದ್ದಾಗಲೇ ಸೇತುವೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಇನ್ನೂ ಸಾಕಷ್ಟು ವರ್ಷ ಈ ಸೇತುವೆಯನ್ನು ಉಳಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕಿದೆ.
ಲೀಲಾವತಿ ವಿರೂಪಾಕ್ಷ ಗೃಹಿಣಿ, ಬೇಲೂರು
ನಮ್ಮೆಲ್ಲರ ಕರ್ತವ್ಯ
ಬೇಲೂರಿನ ಯಗಚಿ ನದಿಗೆ ಅಡ್ಡಲಾಗಿ ಬ್ರಿಟಿಷರ ಕಾಲದಲ್ಲಿ ಕಟ್ಟಿರುವ ಸೇತುವೆ ಉಳಿಸಿಕೊಳ್ಳುವುದು ಬೇಲೂರಿನ ನಾಗರಿಕರಾದ ನಮ್ಮೆಲ್ಲರ ಕರ್ತವ್ಯ. ಇದು ಬೇಲೂರಿನಲ್ಲಿ ಒಂದು ಸ್ಮಾರಕವಿದ್ದಂತೆ. ಈ ಸೇತುವೆ ನಿರ್ವಹಣೆ ಮಾಡುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಧಿಕಾರಿಗಳು ಸೇತುವೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಿಸಲು ಮುಂದಾದರೆ, ನಾವು ಪುರಸಭೆಯಿಂದ ಸೇತುವೆ ಮೇಲೆ ಬೆಳೆದಿರುವ ಗಿಡಗಂಟಿ ತೆರವಿಗೆ ಮುಂದಾಗುತ್ತೇವೆ.
ತೀರ್ಥಕುಮಾರಿ ವೆಂಕಟೇಶ್ ಅಧ್ಯಕ್ಷೆ, ಪುರಸಭೆ ಬೇಲೂರು