ಹೊಳೆನರಸೀಪುರ: ತಾಲೂಕಿನ ಉಲಿವಾಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಥಿಲವಾಗಿದ್ದ ಕೊಠಡಿಯೊಂದು ಗುರುವಾರ ಕುಸಿದು ಬಿದ್ದಿದೆ.
ಶಾಲೆಯಲ್ಲಿ ಇರುವ ಎರಡು ಕೊಠಡಿಗಳಲ್ಲಿ ಒಂದು ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರು ಶಾಲೆಯ ಆವರಣದಲ್ಲಿ ಎರಡು ಹೊಸ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಆದರೆ ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿದಿದ್ದರಿಂದ ಹಳೇ ಕೊಠಡಿಗಳಲ್ಲೇ ತರಗತಿಗಳು ನಡೆಯುತ್ತಿದ್ದವು. ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಗುರುವಾರ ಹಾಗೂ ಶುಕ್ರವಾರ ಜಿಲ್ಲಾದ್ಯಂತ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ತಿಳಿಸಿದರು.
ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆ ಆಗದಂತೆ ಹೊಸ ಕಟ್ಟಡವನ್ನು ಶಾಲೆಯ ಸುಪರ್ದಿಗೆ ಪಡೆದು ಅಲ್ಲಿಯೇ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.