ಕುಶಾಲನಗರ: ಕುಶಾಲನಗರ ತಾಲೂಕು ಕಣಿವೆ ಗ್ರಾಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಕೂಡಲೇ ದುರಸ್ತಿಪಡಿಸಿ ಬಂದ್ ಮಾಡಿರುವ ಗೇಟ್ ಅನ್ನು ತೆರೆದು, ವಿದ್ಯಾರ್ಥಿಗಳು ಹಾಗೂ ಕೃಷಿ ಕಾರ್ಮಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೊಡಗಿನಲ್ಲಿ ಮಳೆ ಸುರಿದು ನದಿಯಲ್ಲಿ ಹೆಚ್ಚಿನ ಪ್ತಮಾಣದ ಹರಿವು ಇದ್ದ ಕಾರಣ ಶಿಥಿಲಗೊಂಡಿರುವ ತೂಗು ಸೇತುವೆಯ ಮೇಲೆ ಸಾರ್ವಜನಿಕರ ಭದ್ರತೆ ದೃಷ್ಟಿಯಿಂದ ಕುಶಾಲನಗರ ತಾಲೂಕು ತಹಸೀಲ್ದಾರರು ಸ್ಥಳ ಪರಿಶೀಲಿಸಿ, ಪ್ರವೇಶ ದ್ವಾರಕ್ಕೆ ಈಚೆಗೆ ಬೀಗ ಹಾಕಿಸಿದ್ದರು.
ಆದರೆ, ಇದೇ ತೂಗು ಸೇತುವೆಯ ಮೂಲಕ ನದಿಯಾಚೆಯ ಗ್ರಾಮಗಳಿಂದ ಕೂಡಿಗೆ ಹಾಗೂ ಕುಶಾಲನಗರದ ವಿವಿಧ ಕಾಲೇಜುಗಳಿಗೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ಕಾರ್ಮಿಕರು ಓಡಾಡುವ ಕಾರಣ ಕೂಡಲೇ ಸೇತುವೆ ದುರಸ್ತಿ ಮಾಡಿ ಅಳವಡಿಸಿರುವ ಬೀಗವನ್ನು ತೆರೆದು ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಕಣಿವೆ ನಿವಾಸಿಗಳು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಈ ವರ್ಷದ ಜನವರಿ 7 ರಂದು ತೂಗುಸೇತುವೆ ವೀಕ್ಷಣೆಗೆ ಆಗಮಿಸಿದ್ದ ಕೊಡಗು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹಾಗೂ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಶಿಥಿಲಗೊಂಡಿರುವ ತೂಗುಸೇತುವೆಯನ್ನು ಮಳೆಗಾಲದ ಒಳಗೆ ಸರಿಪಡಿಸುವುದಾಗಿ ಹೇಳಿದ್ದರಾದರೂ, ಮಳೆಗಾಲ ಶುರುವಾದರೂ ಇತ್ತ ಗಮನಹರಿಸಿಲ್ಲ. ಇನ್ನಾದರೂ ಜಿಲ್ಲಾಧಿಕಾರಿಗಳು ಕೂಡಲೇ ತೂಗುಸೇತುವೆ ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.