ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮದ ಕೆರೆ ಅಂಗಳದ ಪಕ್ಕದಲ್ಲಿರುವ ಪಶು ಆಸ್ಪತ್ರೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಯಾವ ಕ್ಷಣದಲ್ಲಾದರೂ ಬೀಳುವ ಸ್ಥಿತಿಯಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಹಳೇಬೀಡು ಹೋಬಳಿಯ ಹೆಬ್ಬಾಳು ಗ್ರಾಮದಲ್ಲಿ ಕಳೆದ 14 ವರ್ಷದ ಹಿಂದೆ ಕೆರೆಯ ಅಂಗಳದ ಪಕ್ಕದಲ್ಲಿ ಪಶು ಆಸ್ಪತ್ರೆ ನಿರ್ಮಿಸಲಾಗಿತ್ತು. ಸುತ್ತಮುತ್ತಲ ಗ್ರಾಮಗಳಲ್ಲಿರುವ 7500 ಕ್ಕೂ ಹೆಚ್ಚಿನ ಜಾನುವಾರುಗಳಿಗೆ ಮತ್ತು ರೈತರಿಗೂ ಅನುಕೂಲವಾಗುತ್ತಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಉತ್ತಮ ಮಳೆಯಾಗಿ, ಕೆರೆಯಲ್ಲಿ ಭರ್ತಿ ನೀರು ನಿಲ್ಲುತ್ತಿರುವುದರಿಂದ ಕಟ್ಟಡ ಶೀತ ಪೀಡಿತವಾಗಿ ನೀರು ಕುಡಿಯುತ್ತಿರುವುದರಿಂದ ಗೋಡೆಗಳೆಲ್ಲ ಬಿರುಕು ಬಿಟ್ಟಿದೆ.
ಇಂಥ ಸ್ಥಿತಿಯಲ್ಲಿರುವ ಕಟ್ಟಡದಲ್ಲೇ ಪಶು ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸುವಂತಾಗಿದ್ದು, ಜೋರಾಗಿ ಮಳೆ ಬರುವ ಸಂದರ್ಭ ಒಳ ಹೋಗಲು ಹೆದರುವಂತಾಗಿದೆ. ವೈದ್ಯಾಧಿಕಾರಿಗಳ ಕೊಠಡಿ ಹಾಗೂ ಔಷಧ ಸಂಗ್ರಹಣೆ ಕೊಠಡಿಯಲ್ಲಿ ನೀರು ಸೋರುವುದರಿಂದ ಔಷಧಗಳೆಲ್ಲ ಹಾಳಾಗುತ್ತಿವೆ. ಮತ್ತು ಪ್ರತಿನಿತ್ಯ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಬರುವ ರೈತರು ಮತ್ತು ಸಾರ್ವಜನಿಕರಿಗೆ ನಿಲ್ಲಲ್ಲೂ ಜಾಗವಿಲ್ಲದೆ ಕಟ್ಟಡದ ಅಕ್ಕಪಕ್ಕದ ಕೆಸರಿನಲ್ಲೆ ನಿಲ್ಲುವಂತಹ ಪರಿಸ್ಥಿತಿ ಇದೆ.
ಕೆರೆಯ ಅಂಗಳದಲ್ಲಿ ಆಸ್ಪತ್ರೆ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ. ಈಗಿರುವ ಪಶು ಆಸ್ಪತ್ರೆ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿರುವುದರಿಂದ, ಅನಾಹುತ ಸಂಭವಿಸುವ ಮುನ್ನ, ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಬೇರೊಂದು ಸ್ಥಳದಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸಲು ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.