ಜಿಲ್ಲೆ

ಶಿಥಿಲ ಕಟ್ಟಡದಲ್ಲಿ ಆತಂಕದ ವ್ಯಾಸಂಗ: 506 ಶಾಲೆಯ 1114 ಕೊಠಡಿಗಳಿಗೆ ಹಾನಿ ಬೇಕಿದೆ ಕೋಟ್ಯಂತರ ರೂ.ಅನುದಾನ

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ: ನಿರಂತರವಾಗಿ ಮಳೆ ಸುರಿಯುತ್ತಿರುವುದರ ನಡುವೆ ಜಿಲ್ಲೆಯ ವಿವಿಧೆಡೆ ಸರ್ಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಬಡ ಮಕ್ಕಳು ಆತಂಕದಲ್ಲಿ ವ್ಯಾಸಂಗ ಮಾಡುವಂತಾಗಿದೆ.

ಜಿಲ್ಲೆಯಲ್ಲಿ ಕಳೆದ ಬಾರಿ ಸುರಿದ ಭಾರಿ ಮಳೆಯಿಂದ 1560 ಶಾಲೆಗಳ ಪೈಕಿ ಬರೋಬ್ಬರಿ 506 ಶಾಲೆಯ 1114 ಕೊಠಡಿಗಳಿಗೆ ಹಾನಿಯಾಗಿವೆ. ಇವು ತ್ವರಿತ ರಿಪೇರಿಗೆ ಕಾದು ನೋಡುತ್ತಿವೆ. ಹೀಗಿರುವಾಗ ಕೇವಲ 40 ಸರ್ಕಾರಿ ಶಾಲೆಗಳ ದುರಸ್ತಿಗೆ ಅನುದಾನ ಬಂದಿದೆ.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವು ಮೇ 16ರಿಂದ ಪ್ರಾರಂಭವಾಗಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಯಲ್ಲಿ ಮಕ್ಕಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಇದರ ನಡುವೆ ಗ್ರಾಮೀಣ ಭಾಗದ ಬಹುತೇಕ ಸರ್ಕಾರಿ ಶಾಲೆಯ ಕಟ್ಟಡಗಳು ದುಸ್ಥಿತಿಯಲ್ಲಿವೆ. ಇದನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ.

ಹೆಚ್ಚಿನ ಅನುದಾನ ಅಗತ್ಯ: ಜಿಲ್ಲೆಯಲ್ಲಿ 1449 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಈ ಪೈಕಿ 490 ಶಾಲೆಯ 1050 ಕೊಠಡಿಗಳಿಗೆ ಹಾನಿಯಾಗಿವೆ. 111 ಪ್ರೌಢಶಾಲೆಗಳು ಇದ್ದು ಈ ಪೈಕಿ 16 ಶಾಲೆಗಳ 64 ಕೊಠಡಿಗಳಿಗೆ ಹಾನಿಯಾಗಿವೆ. ಆದರೆ, ರಿಪೇರಿಗೆ ಕೋಟ್ಯಂತರ ರೂಪಾಯಿ ಅನುದಾನದ ನಿರೀಕ್ಷೆ ಇದೆ. ಆದರೆ, ತ್ವರಿತ ಬಿಡುಗಡೆಯಾಗುತ್ತಿಲ್ಲ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಬಿದ್ದ ಹೆಚ್ಚುವರಿ ಆರ್ಥಿಕ ಹೊರೆ ಕಾರಣ ಎನ್ನಲಾಗಿದೆ.

ಇನ್ನು ಹಳೇ ಕಟ್ಟಡ ರಿಪೇರಿಗೆ ಹೆಣಗಾಡುತ್ತಿರುವಾಗ ಹೊಸ ಶಾಲಾ ಕಟ್ಟಡದ ನಿರ್ಮಾಣದ ಬಗ್ಗೆ ಹೇಳುವಂತಿಲ್ಲ. ಮತ್ತೊಂದೆಡೆ ಖಾಸಗಿ ಶಾಲೆಗಳು ಹೈಟೆಕ್ ಸವಲತ್ತುಗಳ ಮೂಲಕ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿವೆ. ಇದಕ್ಕೆ ಸರ್ಕಾರಿ ಶಾಲೆಗಳು ಪೈಪೋಟಿಯಾಗಿ ಅಭಿವೃದ್ಧಿ ಕಾಣಬೇಕಾಗಿದ್ದು, ವಿಪತ್ತು ನಿರ್ವಹಣಾ ನಿಧಿ, ನರೇಗಾ ಯೋಜನೆ, ಸಂಘ ಸಂಸ್ಥೆಗಳು ನೆರವನ್ನು ಸದ್ಬಳಕೆ ಮಾಡಿಸಿಕೊಳ್ಳಲಾಗಿದೆ. ಹಿಂದಿನ ಜಿಪಂ ಸಿಇಒ ೌಜೀಯಾ ತರನ್ನುಮ್ ಕಾಳಜಿಯಿಂದ ಹಲವು ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯಾನ ನಿರ್ಮಾಣ, ಪೌಷ್ಟಿಕ ತೋಟ, ಕಾಂಪೌಂಡ್ ನಿರ್ಮಾಣ, ಶಾಲಾ ಕೊಠಡಿಗಳ ದುರಸ್ತಿ ಕೈಗೊಳ್ಳಲಾಗಿತ್ತು. ಇವು ಖಾಸಗಿ ಶಾಲೆಗಳ ಮಾದರಿಯಲ್ಲಿ ಗಮನ ಸೆಳೆದಿದ್ದವು. ಇದೇ ರೀತಿ ಮುಂಬರುವ ದಿನಗಳಲ್ಲಿ ಉಳಿದ ಶಾಲೆಗಳನ್ನು ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಬೇಕಿದೆ.

ಕಳೆದ ಬಾರಿ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಶಾಲಾ ಕೊಠಡಿಗಳು ಹಾನಿಯಾಗಿವೆ. ಇವುಗಳ ದುರಸ್ತಿಗಾಗಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾಗುತ್ತಿದಂತೆ ಶಾಲೆಗಳ ರಿಪೇರಿಗೆ ಕ್ರಮ ಕೈಗೊಳ್ಳಲಾಗುವುದು. ಕೆ.ಎಂ.ಜಯರಾಮರೆಡ್ಡಿ, ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ ****** ಬಹುತೇಕ ಸರ್ಕಾರಿ ಶಾಲೆಗಳಿಗೆ ಬಡ ಮಕ್ಕಳು ಹೆಚ್ಚಿಗೆ ಆಗಮಿಸುತ್ತಾರೆ. ಇದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಪೈಪೋಟಿಯಾಗಿ ಅಭಿವೃದ್ಧಿಪಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ರಾಜಶೇಖರ್, ಪಾಲಕರು ****** ಮಳೆಗಾಲದಲ್ಲಿ ಇದ್ದಕ್ಕಿದ್ದಂತೆ ಅಲ್ಲಲ್ಲಿ ಕಟ್ಟಡಗಳು ಕುಸಿದು ಬೀಳುತ್ತಿವೆ. ಇದರ ನಡುವೆ ಶಿಥಿಲಾವಸ್ಥೆಯ ತರಗತಿಯ ಕೊಠಡಿಗಳು ಬಿದ್ದು ಏನಾದರೂ ಅನಾಹುತಗಳಾದರೆ ಯಾರು ಹೊಣೆ?. ಮಕ್ಕಳ ಹಿತದೃಷ್ಟಿಯಿಂದ ಸಂಬಂಧಪಟ್ಟವರು ಕಟ್ಟಡ ದುರಸ್ತಿಗೆ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು. ವಿ.ರವಿಕುಮಾರ್, ಕನ್ನಡಸೇನೆ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ