ಶಿಕ್ಷಣದ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಈ ಅಂಗನವಾಡಿ ಕೇಂದ್ರ ಕನ್ನಡಿಯಾಗಿದೆ. ದನದ ಕೊಟ್ಟಿಗೆಯಂತಿರುವ ಕಟ್ಟಡದಲ್ಲಿಯೇ ಪುಟ್ಟ ಕಂದಮ್ಮಗಳು ಜೀವಭಯದಲ್ಲಿ ಪಾಠ ಕೇಳುತ್ತಿವೆ.
ಈ ಕೇಂದ್ರ ಯಾವುದೋ ಹಳ್ಳಿ ಅಥವಾ ಕಾಡಂಚಿನ ಪೋಡಿನಲ್ಲಿ ಇಲ್ಲ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಮುಡಿಗುಂಡ ಬಡಾವಣೆಯಲ್ಲಿದೆ. ಪರಿಶಿಷ್ಟ ಜಾತಿ ಬಡಾವಣೆಯ ಅಂಗನವಾಡಿ ಕೇಂದ್ರ-1 ಆಗಿದೆ. ಶಿಥಿಲಗೊಂಡ ಕಟ್ಟಡ, ಸುತ್ತಲು ಗಿಡಗಂಟಿಗಳು, ಅಂಗನವಾಡಿ ಆವರಣದಲ್ಲಿಯೇ ದನ, ಕರುಗಳು ವಾಸ್ತ್ಯವ್ಯ, ಸಗಣಿ, ಗಂಜಲದ ದುರ್ವಾಸನೆ ನಡುವೆಯೇ ಮಕ್ಕಳ ಲಾಲನೆ, ಪಾಲನೆ ಮಾಡಲಾಗುತ್ತಿದೆ.
ಬಡಾವಣೆಯಲ್ಲಿರುವ ಪಾಳುಬಿದ್ದ ಸಮುದಾಯ ಭವನ ಆವರಣದಲ್ಲಿಯೇ ಈ ಕೊಠಡಿ ಇದೆ. ಅಂಗನವಾಡಿಗೂ ಮೊದಲು ಈ ಕೊಠಡಿ ಗ್ರಂಥಾಲಯವಾಗಿತ್ತು. ಇದೀಗ ಅಂಗನವಾಡಿ ಕೇಂದ್ರವಾಗಿ ಕೆಲ ವರ್ಷದಿಂದ ಮಾರ್ಪಟ್ಟಿದೆ. ಸದ್ಯ 10 ಮಕ್ಕಳು ಕೇಂದ್ರದಲ್ಲಿ ದಾಖಲಾಗಿದ್ದಾರೆ. ಆದರೆ, ಅಂಗನವಾಡಿಯ ಶೋಚನೀಯ ಸ್ಥಿತಿ ನೋಡಿ ಯಾವ ಪಾಲಕರೂ ತಮ್ಮ ಮಕ್ಕಳನ್ನು ಕಳುಹಿಸಲು ಧೈರ್ಯ ಮಾಡುವುದಿಲ್ಲ. ಈ ಕಾರಣಕ್ಕೆ ನಿತ್ಯ 3 ರಿಂದ 4 ಮಕ್ಕಳು ಬರುವುದೇ ಹೆಚ್ಚಾಗಿದೆ. ಅದು, ಸ್ವಲ್ಪ ಹೊತ್ತು ಕಾಲ ಕಳೆದು ಬೇಗನೆ ಮನೆಗಳಿಗೆ ಮಕ್ಕಳು ತೆರಳುತ್ತಾರೆ. ಅಂಗನವಾಡಿ ಕಾರ್ಯಕರ್ತೆ ಬಡಾವಣೆಯ ಕೇಂದ್ರ-2 ಇನ್‌ಚಾರ್ಜ್ ಪಡೆದಿದ್ದು. ವಾರದಲ್ಲಿ 3 ದಿನ ಮಾತ್ರ ಬರುತ್ತಾರೆ. ಉಳಿದಂತೆ ಅಂಗನವಾಡಿ ಸಹಾಯಕಿಯೇ ಮಕ್ಕಳನ್ನು ನೋಡಿಕೊಳ್ಳಬೇಕಿದೆ.
ಅಂಗನವಾಡಿ ಕೇಂದ್ರಕ್ಕೆ ಯೋಗ್ಯವಲ್ಲದ ಕಟ್ಟಡದಲ್ಲಿ ಆತಂಕದಲ್ಲಿ ಪಾಲಕರು ಮುಗ್ಧ ಮಕ್ಕಳನ್ನು ಕರೆತರಬೇಕಿದೆ. ಇದನ್ನು ಕಂಡ ಸಾರ್ವಜನಿಕರು ಶಿಕ್ಷಣ ವ್ಯವಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯೋಗ್ಯ ಕಟ್ಟಡಕ್ಕೆ ಅಂಗನವಾಡಿ ಸ್ಥಳಾಂತರ ಮಾಡಬೇಕು ಒತ್ತಾಯವಿದೆ.
ಸೋರುವ ಛಾವಣಿ: ಶಿಥಿಲಗೊಂಡಿರುವ ಅಂಗನವಾಡಿ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ. ಕಳೆದ 1 ತಿಂಗಳಿನಿಂದ ಬೀಳುತ್ತಿರುವ ಮಳೆಗೆ ಛಾವಣಿ ಕಟ್ಟಡದೊಳಗೆ ನೀರು ಜಿನುಗುತ್ತಿದ್ದು, ಅಂಗನವಾಡಿ ಸಹಾಯಕಿಯರು ನಿತ್ಯವೂ ಸ್ವಚ್ಛಗೊಳಿಸಬೇಕಿದೆ. ಛಾವಣಿ ಮೇಲೆ ಗಿಡಗಂಟಿ ಬೆಳೆದು ನಿಂತಿದೆ. ಕಟ್ಟಡದ ಸುತ್ತಲ್ಲೂ ಹಾವು, ಚೇಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಗಬ್ಬು ನಾರುವ ಆವರಣ: ಅಂಗನವಾಡಿ ಮುಂದೆಯೇ ಸ್ಥಳೀಯರು ದನ, ಕರುಗಳನ್ನು ಕಟ್ಟಿ ಹಾಕುವುದುಂಟು. ದನ, ಕರುಗಳು ಸ್ಥಳದಲ್ಲಿಯೇ ಸಗಣಿ, ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ ಬೀರುತ್ತಿದೆ. ಸಮುದಾಯದ ಭವನದ ಕಾಂಪೌಂಡ್ ಒಳಗಡೆಯೇ ಅಂಗನವಾಡಿ ಕೇಂದ್ರವಿದೆ. ಸತತ ಮಳೆಯಿಂದಾಗಿ ಅಂಗನವಾಡಿ ಆವರಣದಲ್ಲಿ ರಾಡಿ ನಿಂತಿದೆ. ಅಂಗನವಾಡಿ ಕೊಠಡಿಯಿಂದ ಮಕ್ಕಳು ಹೊರಗೆ ಬಂದು ನಿರ್ಭಯವಾಗಿ ಆಟವಾಡಲು ಸಾಧ್ಯವೇ ಇಲ್ಲ. ಪಾಲಕರು ಮಕ್ಕಳು ಕೇಂದ್ರಕ್ಕೆ ಬಿಟ್ಟರೆ ನಂತರ, ಅವರೇ ಕರೆದೊಯ್ಯುತ್ತಾರೆ. ಅಂಗನವಾಡಿ ಕೇಂದ್ರದಲ್ಲಿ ಸದಾ ನಿಂತಿರುವ ನೀರು, ಸಗಣಿ ಅನೈರ್ಮಲ್ಯದಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇದ್ದರಿಂದ ಮಕ್ಕಳಿಗೆ ಅನಾರೋಗ್ಯಕ್ಕೆ ಒಳಗಾದರೆ ಗತಿ ಏನು ಎಂಬ ಪ್ರಶ್ನೆ ಸ್ಥಳೀಯರದ್ದು.
ಮುಡಿಗುಂಡದ ಕೇಂದ್ರ ಅಂಗನವಾಡಿ ಕೇಂದ್ರ-1 ಶಿಥಿಲಾವಸ್ಥೆ ತಲುಪಿದೆ. ಮಕ್ಕಳ ಶಿಕ್ಷಣಕ್ಕೆ ಈ ಕಟ್ಟಡ ಯೋಗ್ಯವಾಗಿಲ್ಲ. ಪಾಲಕರಲ್ಲಿ ಆತಂಕವಿದ್ದು, ಕೆಲವರು ಮಕ್ಕಳನ್ನು ಕಳುಹಿಸುವುದಿಲ್ಲ. ಹಾವು, ಚೇಳು ಕಾಣಿಸಿಕೊಳ್ಳುವುದು ಸಾಮಾನ್ಯ. ದನ, ಕರುಗಳ ಕೊಟ್ಟಿಗೆ ನಡುವೆಯೇ ಬಡ ಮಕ್ಕಳು ಪಾಠ ಕೇಳಬೇಕು. ಇದ್ದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಸಾಗರ್, ಮುಡಿಗುಂಡ ನಿವಾಸಿ ಸಾರ್ವಜನಿಕರು ದನ, ಕರುಗಳು ಕಟ್ಟಿ ಹಾಕುತ್ತಿದ್ದಾರೆ. ಅಂಗನವಾಡಿ ಕಟ್ಟಡ ಆವರಣ ಸ್ವಚ್ಛಗೊಳಿಸಲು ಸೂಚನೆ ನೀಡಲಾಗುವುದು. ಮತ್ತೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ನಂಜಮಣಿ, ಸಿಡಿಪಿಒ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ