ಕಲಬುರಗಿ: ಎಲ್ಲರೂ ಸಂಕುಚಿತ ಮನೋಭಾವದಿಂದ ಹೊರಬರಬೇಕು. ಶ್ರದ್ಧೆಯಿಂದ ಕಾಯಕವನ್ನು ಮಾಡಿ, ನಮ್ಮ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕು. ಶಿಕ್ಷಿತರು ಸವಿತಾ ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದು ಅಬಕಾರಿ ಇಲಾಖೆ ವಿಭಾಗೀಯ ಜಂಟಿ ಆಯುಕ್ತ ಬಸವರಾಜ ಹಡಪದ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸವಿತಾ ಸಮಾಜ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಸಮಾಜದ ಪ್ರತಿಭಾವಂತರು, ಸಾಧಕರಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಸಮಾಜದವರು ಬಡವರಿದ್ದರೂ ಶಿಕ್ಷಣ ನೀಡಿ, ಉನ್ನತ ಸ್ಥಾನಕ್ಕೆ ಏರುವಂತೆ ಮಾಡಬೇಕು ಎಂದು ಹೇಳಿದರು.
ಸವಿತಾ, ಹಡಪದ, ನಾವಿ ಎಂದು ಬೇರೆ ಬೇರೆ ಹೆಸರುಗಳಲ್ಲಿ ನಮ್ಮ ಸಮಾಜವನ್ನು ಕರೆದರೂ ಸಹ, ನಾವೆಲ್ಲರೂ ಒಂದಾಗಿ ಶಿಕ್ಷಣದಿಂದ ವಂಚಿತರಾಗದೆ ಮುಂದೆ ಸಾಗಬೇಕು. ಪ್ರತಿ ಜಿಲ್ಲೆಗಳಲ್ಲಿ ಸಂಘಗಳನ್ನು ರಚಿಸಿ, ಸಹಕಾರ ಬ್ಯಾಂಕ್ ಸ್ಥಾಪಿಸಬೇಕು. ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಹೇಳಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಅಜಯಕುಮಾರ ದಾಮರಗಿದ್ದಾ ಮಾತನಾಡಿ, ಪ್ರಶಸ್ತಿ ಪುರಸ್ಕೃತರಿಂದ ಇತರರು ಪ್ರೇರಣೆ ಪಡೆಯಬೇಕು. ಸವಿತಾ ಸಮಾಜದವರು ಸರ್ವ ರೀತಿಯಿಂದಲೂ ಮುಂದೆ ಬರಬೇಕು. ಉನ್ನತ ಹುದ್ದೆಗೆ ಏರಬೇಕು. ಬಹುದಿನಗಳ ಬೇಡಿಕೆಯಾದ ಪ್ರವರ್ಗ ೧ಕ್ಕೆ ಸೇರಿಸುವ ಆಗ್ರಹಕ್ಕೆ ವೇಗ ನೀಡಬೇಕು ಎಂದು ಹೇಳಿದರು.
ಕೆಯುಡಬ್ಲೂಜೆ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಪಾಲಿಕೆ ಸದಸ್ಯೆ ತೃಪ್ತಿ ಲಾಖೆ, ಎಸ್‌ಬಿಐ ವೈದ್ಯಾಧಿಕಾರಿ ಡಾ.ಅಶ್ವಿನಿಕುಮಾರಿ ಧನವಾಡಕರ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ್, ಪ್ರಮುಖರಾದ ಬಾಬುರಾವ ಹಕೀಮ್, ಮಲ್ಲಣ್ಣ ಗೋಗಿ, ಜ್ಯೋತಿ ಆಡಕಿ, ನಾಗಪ್ಪ ಗೋಗಿ, ಮಹೇಶ ಉಜ್ಜೆಲೀಕರ್, ಶ್ರೀಪಾದ ವಿಭೂತಿ, ಅಶೋಕ ಶಾಸ್ತಿç, ಶ್ರೀನಿವಾಸ ತಾಂಡೂರಕರ್, ಗಂಗಾಧರ ಸುರಪುರ, ಸೀಮಾ ವಿಭೂತಿ ಇತರರಿದ್ದರು.