ಜಿಲ್ಲೆ

ಶಿಕ್ಷಿತರು ಮಾತ್ರವಷ್ಟೇ ಸಾಧಕರಲ್ಲ: ಮನೋಜ್ ಸಿನ್ಹಾ

ಮೈಸೂರು: ಕೇವಲ ಶಿಕ್ಷಿತರು ಮಾತ್ರ ಸಾಧಕರಲ್ಲ. ಜ್ಞಾನ, ಪ್ರತಿಭಾವಂತರೂ ಶಿಕ್ಷಣ ಮೀರಿದ ಸಾಧನೆ ಮಾಡಬಲ್ಲರು ಎಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದರು.
ಜೆಎಸ್‌ಎಸ್ ವಿದ್ಯಾಪೀಠ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಿಂದ ಶನಿವಾರ ಎಸ್‌ಜೆಸಿಇ ಆವರಣದಲ್ಲಿ ಆಯೋಜಿಸಿದ್ದ ಕಾಲೇಜಿನ ವಜ್ರ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಿತರು ಮಾತ್ರ ಸಾಧಕರಾಗಬಹುದು ಎನ್ನುವ ಅಭಿಪ್ರಾಯವಿದೆ. ಅನಾದಿಕಾಲದಿಂದಲೂ ನಮ್ಮಲ್ಲಿ ಶಿಕ್ಷಿತರಲ್ಲದವರು ಸಹ ಸಾಧನೆ ಮಾಡಿ ತೋರಿಸಿದ್ದಾರೆ. ಜ್ಞಾನ ಹಾಗೂ ಪ್ರತಿಭಾವಂತರು ಶಿಕ್ಷಣ ಮೀರಿದ ಸಾಧನೆ ಮಾಡಬಹುದು ಎಂಬುದನ್ನು ಗಾಂಧಿ, ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚನ್ ಸೇರಿದಂತೆ ಅನೇಕರು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.
ಶಿಕ್ಷಣ ನಮ್ಮ ವ್ಯಕ್ತಿಗತ, ಆಂತರ್ಯದ ಯಾತ್ರೆ. ಇದು ಜೀವನಪರ್ಯಂತ ನಡೆಯುವ ಯಾತ್ರೆ. ಇಲ್ಲಿ ವಿಶೇಷ ಅಂತರ್ಧ್ವನಿ ಇರುತ್ತದೆ. ಆ ಅಂತರ್ಧ್ವನಿಯಂತೆ ನಾವು ಮುನ್ನಡೆಯಬೇಕು. ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು. ವಿಜ್ಞಾನ, ತಂತ್ರಜ್ಞಾನ, ಸಂಶೋಧನೆಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಕಳೆದ 8 ವರ್ಷಗಳಲ್ಲಿ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಿದೆ. ಕರೊನಾದಿಂದಾಗಿ ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದರೆ ಭಾರತ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
ನೂತನ ತಂತ್ರಜ್ಞಾನ, ಸಂಶೋಧನೆ, ಆವಿಷ್ಕಾರಗಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದು, ಸೂಪರ್ ಪವರ್ ರಾಷ್ಟ್ರವಾಗಲು ಕಾರಣವಾಗಿದೆ. ಜತೆಗೆ ವಿಜ್ಞಾನ ತಂತ್ರಜ್ಞಾನದೊಂದಿಗೆ ಆಧ್ಯಾತ್ಮಿಕತೆಯಲ್ಲೂ ಭಾರತ ಮುಂದುವರಿದಿದೆ ಎಂದು ಹೇಳಿದರು.
ಭಾರತ ಅಭಿವೃದ್ಧಿಗೆ ಮಾತ್ರವಲ್ಲದೆ ವಿಶ್ವದ ಶಾಂತಿ, ನೆಮ್ಮದಿಗೆ ಶ್ರಮಿಸುತ್ತಿದೆ. ವಸುದೈವ ಕುಟುಂಬಕಂ, ಒಂದು ರಾಷ್ಟ್ರ, ಒಂದು ಕುಟುಂಬ ಎಂಬ ಪರಿಕಲ್ಪನೆಯಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಮಾನವ ಕಲ್ಯಾಣವೇ ಭಾರತದ ಧ್ಯೇಯವಾಗಿದೆ. ಹೀಗಾಗಿ ಭಾರತಕ್ಕೆ ಜಿ-20 ಶೃಂಗಸಭೆಯ ಅಧ್ಯಕ್ಷ ಸ್ಥಾನ ದೊರೆತಿರುವುದು ಎಲ್ಲರ ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಮಹಾವಿದ್ಯಾಪೀಠ ಜ್ಞಾನ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. 21ನೇ ಶತಮಾನದಲ್ಲಿ ಯುವಕರನ್ನು ಕೌಶಲವಂತರಾಗಿಸಲು ಶ್ರೀ ಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಶ್ರಮಿಸುತ್ತಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕೇವಲ ಕೌಶಲವಂತರಾಗಿಸದೆ ಮಾನವೀಯ ಗುಣಗಳನ್ನೂ ಬೆಳೆಸಬೇಕು. ದೇಶದ ಸಂಪತ್ತನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಬುದ್ಧ, ಮಹಾವೀರ, ಶಂಕರಾಚಾರ್ಯ ಸೇರಿದಂತೆ ಅನೇಕ ಋಷಿ ಮುನಿಗಳು, ಸಂತರು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದು, ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸುತ್ತೂರು ಶ್ರೀಗಳು ಮಠವನ್ನು ದಿವ್ಯ ಕೇಂದ್ರವಾಗಿ ಮಾಡಿದ್ದಾರೆ ಎಂದು ಬಣ್ಣಿಸಿದರು.
ಎಸ್‌ಜೆಸಿಇ ಆವರಣದಲ್ಲಿ ನಿರ್ಮಿಸಲಾಗಿರುವ ಬಹುಮಾಧ್ಯಮ ಸಂಪನ್ಮೂಲ ಕೇಂದ್ರವನ್ನು ಮನೋಜ್ ಸಿನ್ಹಾ ಉದ್ಘಾಟಿಸಿದರು. ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಲ್.ನಾಗೇಂದ್ರ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ, ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ, ನಿರ್ದೇಶಕ ಡಾ.ಬಿ.ಸುರೇಶ್, ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕುಲಪತಿ ಡಾ.ಎ.ಎನ್.ಸಂತೋಷ್ ಕುಮಾರ್ ಇದ್ದರು.