ಔರಾದ್: ವಿಕಾಸಕ್ಕೆ ಶಿಕ್ಷಣವೇ ಬುನಾದಿಯಾಗಿದೆ. ಶಿಕ್ಷಣ ಕ್ಷೇತ್ರದ ಪ್ರಗತಿಯಾಗದ ಹೊರತು ಯಾವುದೇ ಕ್ಷೇತ್ರಗಳ ಅಭಿವೃದ್ಧಿ ಅಸಾಧ್ಯ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ, ನಿವೃತ್ತ ಶಿಕ್ಷಕರು ಹಾಗೂ ನಿಧನ ಹೊಂದಿದ ಶಿಕ್ಷಕರ ಅವಲಂಬಿತರನ್ನು ಸನ್ಮಾನಿಸಿ ಮಾತನಾಡಿ, ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಮೊದಲು ಶಾಸಕನಾಗಿದ್ದಾಗ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.೩೩ ಇತ್ತು. ಇದೀಗ ಶೇ.೮೦ ಆಗಿದೆ. ಇದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
ತಂದೆ, ತಾಯಿ ಮಕ್ಕಳನ್ನು ಪೋಷಿಸಿದರೆ ಶಿಕ್ಷಕರು ಮಕ್ಕಳಿಗೆ ವಿದ್ಯೆ, ಬುದ್ಧಿ ಕಲಿಸಿ ಉತ್ತಮ ಭವಿಷ್ಯ ರೂಪಿಸುತ್ತಾರೆ. ಸಮಾಜದಲ್ಲಿ ಗುರುವಿಗೆ ಮೇರು ಸ್ಥಾನವಿದೆ. ಶಿಕ್ಷಕರನ್ನು ಗೌರವಿಸುವುದೇ ನನ್ನ ಸೌಭಾಗ್ಯ ಎಂದರು.
ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಶಾಸಕ ಪ್ರಭು ಚವ್ಹಾಣ್ ಶಿಕ್ಷಕರನ್ನು ಗೌರವಿಸುವುದರಿಂದ ಶಿಕ್ಷಕರ ಮನೋಬಲ ವೃದ್ಧಿಸುತ್ತಿದೆ. ಮಕ್ಕಳಿಗೆ ನೈತಿಕ ಶಿಕ್ಷಣ, ನೀಡಿ ಸಂಸ್ಕಾರ ಕಲಿಸುವ ಅವಕಾಶ ಶಿಕ್ಷಕರಿಗೆ ಸಿಗುತ್ತದೆ. ತಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಉತ್ತಮ ಶಿಕ್ಷಕರು ಹಾಗೂ ನಿವೃತ್ತ ಮತ್ತು ಮರಣ ಹೊಂದಿದ ಶಿಕ್ಷಕರ ಅವಲಂಬಿತರನ್ನು ಶಾಸಕರು ಸನ್ಮಾನಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ದೊಂಡಿಬಾ ನರೋಟೆ, ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ಅಮಿತ ಕುಲಕರ್ಣಿ, ಬಿಇಒ ಪ್ರಕಾಶ ರಾಠೋಡ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಾಜಿ ಬೆಂಜರವಾಡೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಘಾಟೆ, ಔರಾದ ವೃತ್ತ ನಿರೀಕ್ಷಕ ರಘುವೀರಸಿಂಗ್, ಪ್ರಮುಖರಾದ ವಸಂತ ಬಿರಾದಾರ, ಶಿವಾಜಿರಾವ ಪಾಟೀಲ್ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ್, ಸಾಗರ ಪಾಟೀಲ್, ರಮೇಶ ಉಪಾಸೆ, ಶಿವರಾಜ ಅಲ್ಮಾಜೆ, ಸೂರ್ಯಕಾಂತ ಬಿರಾದಾರ, ಸಂಜು ಮೇತ್ರೆ, ಕೃಷ್ಣ ರೆಡ್ಡಿ, ಸೂರ್ಯಕಾಂತ ಶಿಂಗೆ, ಪ್ರಶಾಂತ ಮಠಪತಿ, ಶಿವಶರಣಪ್ಪ ವಲ್ಲೇಪೂರೆ, ಸಂಜು ಶೆಟಕಾರ್, ಮಹಾದೇವ ಚಿಟಗೀರೆ, ಗುರುನಾಥ ದೇಶಮುಖ, ಬಾಲಾಜಿ ಅಮರವಾಡಿ ಇತರರಿದ್ದರು.
ಕಸಾಪ ತಾಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗೀರೆ ಪ್ರಾಸ್ತಾವಿಕ ಮಾತನಾಡಿದರು. ಬಿಇಒ ಎಂ.ಡಿ ಮಕ್ಸೂದ್ ಅಹ್ಮದ್ ಸ್ವಾಗತಿಸಿದರು.