ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಹುದೊಡ್ಡ ತೊಡಕಾಗಿರುವ ಗುಣಮಟ್ಟದ ಶಿಕ್ಷಣದ ಸಮಸ್ಯೆ ನೀಗಿಸಿದರೆ ಈ ಭಾಗದ ಪ್ರಗತಿ ಸಾಧ್ಯವಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳು, ಸಚಿವರು ಶಿಕ್ಷಣದ ಬಗ್ಗೆ ಮಾತನಾಡಲ್ಲ ಎಂದು ಟಿ.ಆರ್.ಚಂದ್ರಶೇಖರ ಬೇಸರ ವ್ಯಕ್ತಪಡಿಸಿದರು.
ಸಿಪಿಐ(ಎಂ) ರಾಜ್ಯ ಸಮ್ಮೇಳನ ಪ್ರಯುಕ್ತ ನಗರದ ಕನ್ನಡ ಭವನದ ಸುವರ್ಣಸೌಧದಲ್ಲಿ ಶನಿವಾರ ನಡೆದ `ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಸವಾಲುಗಳು ಮತ್ತು ಸಾಧ್ಯತೆಗಳು' ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅಭಿವೃದ್ಧಿಗೆ ಸ್ತಿçà ಶಿಕ್ಷಣ, ಹಿಂದುಳಿದವರ ಶಿಕ್ಷಣವೇ ಮಾನದಂಡವಾಗಬೇಕು. ಆಗ ಮಾತ್ರ ಈ ಭಾಗದ ಅಭಿವೃದ್ಧಿಗೆ ಶಕ್ತಿ ಬರಲಿದೆ ಎಂದರು.
ಉತ್ತಮ ಶಿಕ್ಷಣ, ಆರೋಗ್ಯ, ಅಪೌಷ್ಠಿಕತೆ ನಿವಾರಣೆ, ಸಮರ್ಪಕ ಮೂಲ ಸೌಲಭ್ಯವೂ ಮುಖ್ಯವಾಗುತ್ತದೆ. ನೀರಾವರಿ ಇರುವ ಪ್ರದೇಶ ಶ್ರೀಮಂತ ಎಂಬ ಭಾವನೆ ಎಲ್ಲರಲ್ಲೂ ಇದ್ದು, ಶೇ.೫೦ ನೀರಾವರಿ ಇರುವ ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಬಡತನ ಇರುವುದು ಹೇಗೆ ಎಂದು ಪ್ರಶ್ನಿಸಿದರು.
ಕೆಕೆಆರ್‌ಡಿಬಿಯಿಂದ ಸಾವಿರಾರೂ ಕೋಟಿ ರೂ. ಹಣ ಈ ಭಾಗದ ಅಭಿವೃದ್ಧಿಗೆ ನೀಡಲಾಗುತ್ತದೆ. ಅದರಲ್ಲಿ ಶಿಕ್ಷಣಕ್ಕೆ, ಮಹಿಳಾ ಅಪೌಷ್ಟಿಕತೆ ನಿವಾರಣೆಗೆ ಹೆಚ್ಚಿನ ಹಣ ಮೀಸಲಿಡಬೇಕು. ವರ್ಷದಿಂದ ವರ್ಷಕ್ಕೆ ಸಿಮೆಂಟ್ ರಸ್ತೆ ನಿರ್ಮಿಸಲಾಗುತ್ತಿದ್ದು, ಬದುಕು ಕಟ್ಟಲು ಶಿಕ್ಷಣ, ಅಪೌಷ್ಟಿಕತೆ ನಿವಾರಣೆಗೆ ಹಣ ನೀಡಬೇಕು ಎಂದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷö್ಮಣ ದಸ್ತಿ ಮಾತನಾಡಿ, ಕೆಕೆಆರ್‌ಡಿಬಿಗೆ ಸಾವಿರಾರು ಕೋಟಿ ರೂ. ಬಂದರೂ ಅಭಿವೃದ್ಧಿ ಆಗುತ್ತಿಲ್ಲ, ೧೦-೧೫ ವರ್ಷದ ಗುರಿಯೊಂದಿಗೆ ದೀರ್ಘ ಕಾಲದ ಕ್ರಿಯಾ ಯೋಜನೆ ರೂಪಿಸುತ್ತಿಲ್ಲ. ಶಾಸಕರಿಗೆ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದರಿಂದ ಸಚಿವ ಸಂಪುಟದ ಇತರರಿಗೆ ಸಮಸ್ಯೆ ಅರ್ಥ ಆಗಲ್ಲ. ಆದ್ದರಿಂದ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದರು.
ಪತ್ರಕರ್ತ ಡಾ.ಎಸ್.ವೈ.ಗುರುಶಾಂತ ಮಾತನಾಡಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿದರು. ಪಕ್ಷದ ಯು. ಬಸವರಾಜ, ಕೆ.ಜಿ.ವಿರೇಶ್, ಅಂಬುಬಾಯಿ ಮಾಳಗಿ, ಚನ್ನಪ್ಪ ಆನೆಗುಂದಿ, ದೌಲ್ ಸಾಬ್, ಚಂದ್ರಪ್ಪ ಹೊಸ್ಕೇರಾ, ಗಿರೆಪ್ಪ ಪೂಜಾರಿ, ದೇವೇಂದ್ರಪ್ಪ ಹೊತಪೇಟೆ, ಪ್ರಭು ಖಾನಾಪುರೆ, ವೀರೂಪಾಕ್ಷಪ್ಪ ತಡಕಲ್, ಶ್ರೀಮಂತ ಬಿರಾದಾರ, ಶರಣಬಸಪ್ಪ ಮಮಶೆಟ್ಟಿ, ಗೌರಮ್ಮ ಪಾಟೀಲ್, ಲವಿತ್ರಾ ಇತರರಿದ್ದರು.