ಹನೂರು: ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ಸಮುದಾಯವು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಇದರಿಂದ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಚಿತ್ರದುರ್ಗ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಚನ್ನಾಲಿಂಗನಹಳ್ಳಿ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇಗುಲದಲ್ಲಿ ಸೋಮವಾರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಕ್ಷೇತ್ರ ಪವಾಡ ಪುರುಷರಾದ ಶ್ರೀ ಮಲೆಮಹದೇಶ್ವರರು, ಮಂಟೇಸ್ವಾಮಿ, ಸಿದ್ದಪ್ಪಾಜಿ ಹಾಗೂ ಬಿಳಿಗಿರಿರಂಗಯ್ಯ ನೆಲೆಸಿರುವ ಧಾರ್ಮಿಕ ಪುಣ್ಯ ಸ್ಥಳ. ಹಾಗಾಗಿ ಇಲ್ಲಿ ತನ್ನದೇಯಾದ ಧಾರ್ಮಿಕ ಇತಿಹಾಸವನ್ನು ಹೊಂದಿದೆ. ಈ ದೆಸೆಯಲ್ಲಿ ಸಿದ್ದಪ್ಪಾಜಿ ದೇಗುಲವನ್ನು ಸ್ಥಾಪಿಸಿರುವುದು ಪುಣ್ಯದ ಕೆಲಸ. ಆದ್ದರಿಂದ ಜೀವನದಲ್ಲಿ ನೆಮ್ಮದಿಯನ್ನು ಕಾಣಬೇಕಾದರೆ ಮಹಾನ್ ಪುರುಷರನ್ನು ನೆನೆಯುವುದು ನಮ್ಮ ಕರ್ತವ್ಯ ಎಂದರು.
ಜೀವನದಲ್ಲಿ ಉನ್ನತಿ ಪಡೆಯಬೇಕಾದರೆ ನಮಗೆ ನಾವೇ ಬದಲಾಗಬೇಕೇ ಹೊರತು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಮಂತ್ರಿಗಳು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಕ್ಷಣಿಕಕ್ಕೆ ಒಂದಿಷ್ಟು ಸೌಕರ್ಯ ದೊರಕಿಸಿ ಕೊಡಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ಜೀವನಕ್ಕೆ ಅನುಕೂಲವಾಗದು. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಬಸವಮೂರ್ತಿ ಮಾದರ ಚೆನ್ನಯ್ಯ ಶ್ರೀಗಳು ಪೀಠವನ್ನು ಅಲಂಕರಿಸಿ ಸಮುದಾಯ ಅಭಿವೃದ್ಧಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಾರ್ಯವೈಖರಿ ಯುವಕರಿಗೆ ಸ್ಫೂರ್ತಿದಾಯಕವಾಗಿದೆ. ಗ್ರಾಮದಲ್ಲಿ ದೇಗುಲವನ್ನು ನಿರ್ಮಿಸಿರುವುದು ಭಕ್ತಿ-ಭಾವದ ಸಂಕೇತವಾಗಿದೆ. ಹಾಗೆಯೇ ಮಕ್ಕಳ ಶಿಕ್ಷಣಕ್ಕೂ ಪಾಲಕರು ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.
ಕುರುಬನಕಟ್ಟೆ ಕ್ಷೇತ್ರದ ವರುಣ್ ಲಿಂಗರಾಜೇ ಅರಸ್, ಮಾಜಿ ಸಚಿವ ಎಂ.ಶಿವಣ್ಣ, ಮಾದಿಗ ಮೀಸಲಾತಿ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ್, ಮುಖಂಡರಾದ ರಾಚಪ್ಪ, ನಿಂಗರಾಜು, ದೊಡ್ಡಯ್ಯ, ಪ್ರಭು, ಮಾದೇಶ, ಲಿಂಗರಾಜು, ರವಿ, ಪುಟ್ಟರಾಜು ಇನ್ನಿತರರಿದ್ದರು.