ಚಿತ್ತಾಪುರ: ಪ್ರತಿಯೊಬ್ಬರಿಗೂ ಶಿಕ್ಷಣ ಅತಿ ಅವಶ್ಯಕವಾಗಿದ್ದು, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಹೊಸ ಬದಲಾವಣೆ ಕಾಣಲು ಸಾಧ್ಯ ಎಂದು ಮಾಜಿ ಶಾಸಕರಾದ ನಾಗಾವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಶ್ವನಾಥ ಪಾಟೀಲ್ ಹೆಬ್ಬಾಳ ಹೇಳಿದರು.
ಪಟ್ಟಣದ ಬಾಪುರಾವ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಭಾನುವಾರ ನಾಗಾವಿ ಶಿಕ್ಷಣ ಸಂಸ್ಥೆಯ ಎನ್‌ಇಎಸ್ ಪ್ರೌಢಶಾಲೆಯ ೧೯೯೩-೯೬ರ ಅವಧಿಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಶಾಲೆ ಅಚ್ಚುಕಟ್ಟಾಗಿ ನಡೆಯಬೇಕಾದರೆ ಉತ್ತಮ ಶಿಕ್ಷಕರ ಜತೆ ಒಳ್ಳೆಯ ವಿದ್ಯಾರ್ಥಿಗಳು ಇರುವುದು ಅಗತ್ಯ ಎಂದರು.
ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಕೆಲಸವಲ್ಲ. ಗುಣಮಟ್ಟದ ಶಿಕ್ಷಣ ಮೂಲಕ ವಿದ್ಯಾರ್ಥಿಗಳ ಜೀವನ ರೂಪಿಸುವುದು ಬಹುದೊಡ್ಡ ಸೇವೆ. ನಮ್ಮ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಗುರುವಂದನೆ ಮೂಲಕ ಕಲಿಸಿದ ಗುರುಗಳಿಗೆ ಗೌರವ ಸಮರ್ಪಣೆ ಮಾಡಿರುವುದನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಂತಾ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಗಳಿಸಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಜೀವನ ರೂಪಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಎನ್‌ಇಎಸ್ ಶಾಲೆ ಮುಖ್ಯಗುರು ಪ್ರಕಾಶ ಪಾಟೀಲ್, ಶಿಕ್ಷಕರಾದ ಧರ್ಮರಾಜ ಜಕಾಪುರೆ, ಜಯಂತ ಕುಲಕರ್ಣಿ, ದೇವಿಂದ್ರಪ್ಪ ಶಾಲಿ, ಹಳೇ ವಿದ್ಯಾರ್ಥಿ ಶರಣಗೌಡ ಜಿ.ಪಾಟೀಲ್ ಮಾತನಾಡಿದರು. ಅಮಿತ್ ಕುಲಕರ್ಣಿ ಶಾಲೆ ನಡೆದು ಬಂದ ದಾರಿ ಮೇಲೆ ಬೆಳಕು ಚೆಲ್ಲಿದರು.
ಶಿಕ್ಷಕರಾದ ಸಿದ್ದಾರೂಢ ಅಪಚಂದ, ಶಿವಶರಣಪ್ಪ ಅರಿಕೇರಿ, ದೇವಿಂದ್ರಪ್ಪ ಜಮಶೆಟ್ಟಿ, ಸುವರ್ಣ ಸಿಪಾಯಿ ರಮೇಶ, ಹಳೆಯ ವಿದ್ಯಾರ್ಥಿಗಳಾದ ಗೌತಮ ನಾಯಕ್, ಜಹೀರ್ ಜುನೈದಿ, ರಾಜಶೇಖರ ಭಂಕಲಗಿ, ಆಂಬರೀಶ ಸುಲೇಗಾಂವ, ಮಹೇಶ ರೇಷ್ಮಿ, ಶರಣುಗೌಡ ಹೊನ್ಸಾಳ, ರಾಜಶೇಖರ ಗೋಣಿ, ರಾಜೇಶ ಪೈಲಟ್, ವೆಂಕಟ್ ಬಸುದೆ, ಸೋಮಶೇಖರ ಸಂಕನೂರ, ಜಗ್ಗು ಶಕಾಪುರ, ಮಂಜುನಾಥರೆಡ್ಡಿ ಪಾಲಪ್, ವಿಶ್ವನಾಥ ಮೋರ್ಲೆ, ಪಲ್ಲವಿ ತೇಲ್ಕರ್, ಶಕುಂತಲಾ ಪಾಟೀಲ್, ಅನ್ನಪೂರ್ಣ ಗೊಬ್ಬುರ, ಶ್ರೀನಿವಾಸ ಕಾಂಬ್ಳೆ, ಮಾಣಿಕರಾವ ಪತಂಗೆ, ಮಾಂತೇಶ ಮೂಲಗೆ, ಸಂತೋಷ ಪಾಟೀಲ್, ಶರಣಗೌಡ ಪಾಟೀಲ್ ಅಲ್ಲೂರ, ಇಮ್ರಾನ್ ಗೋಲಾ, ವೀರೇಶ ಪಾಟೀಲ್ ಮರಗೊಳ ಇತರರಿದ್ದರು. ಪವನ ಕುಲಕರ್ಣಿ ನಿರೂಪಣೆ ಮಾಡಿದರು. ರೂಪಾ ಪತಂಗೆ ಸ್ವಾಗತಿಸಿದರು. ಮಲ್ಲರೆಡ್ಡಿ ವಂದಿಸಿದರು.
ಬಳಿಕ ಹಳೇ ವಿದ್ಯಾರ್ಥಿಗಳಿಂದ ಕವನ, ಹಾಡು, ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಳೆಯ ಸ್ನೇಹಿತರೊಂದಿಗೆ ಸೇರಿ ಹರಟೆ ಹೊಡೆದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.