ವಿಜಯಪುರ: ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಹೀಗಾಗಿ ಶಾಸಕರ ನಿಧಿಯನ್ನು ಸಮುದಾಯ ಭವನಗಳಿಗೆ ಬದಲಾಗಿ ಶಿಕ್ಷಣಕ್ಕೆ ಮೀಸಲಿಡಲು ತೀರ್ಮಾನಿಸಿದ್ದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿದ್ದಪ್ಪ ಭೀಮರಾಯ ಕಲ್ಲೂರ ನೂತನ ಗ್ರಂಥಾಲಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಎರಡು ಕೋಟಿ ಶಾಸಕರ ನಿಧಿಯಲ್ಲಿ 70 ಲಕ್ಷಕ್ಕೂ ಅಧಿಕ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವೆ. ಮುಂದೆಯೂ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಶಾಸಕ ನಿಧಿ ಮೀಸಲಿಡುವೆ ಎಂದ ಅವರು, ಹಿರೇಮಸಳಿ ನೂತನ ಗ್ರಂಥಾಲಯಕ್ಕೆ 2 ಲಕ್ಷ ರೂ. ಮೊತ್ತದ ಗುಣಮಟ್ಟದ ಪುಸ್ತಕ ಖರೀದಿಸಿ ಕೊಡುವುದಾಗಿ ಭರವಸೆ ನೀಡಿದರು.
ಇಂಡಿ ವಿಧಾನ ಸಭೆ ಕ್ಷೇತ್ರ ಸರ್ವಾಂಗೀಣ ಪ್ರಗತಿ ಸಾಧಿಸುತ್ತಿದೆ. ಲಿಂಬೆ ಅಭಿವೃದ್ಧಿ ನಿಗಮ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದಾಗಿ ಸಾಕಷ್ಟು ಅನುಕೂಲವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವೆ ಎಂದರಲ್ಲದೇ ಗ್ರಾಮಸ್ಥರ ಮನವಿ ಮೇರೆಗೆ ಹಿರೇಮಸಳಿ ಹಳ್ಳದ ಸೇತುವೆ ನಿರ್ಮಿಸುವ ಭರವಸೆ ನೀಡಿದರು.
ಮಾಜಿ ಶಾಸಕ ಆರ್.ಆರ್. ಕಲ್ಲೂರ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಶಾಸಕನಾಗಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿರುವೆ. ಇದೀಗ ಶಾಸಕ ಯಶವಂತರಾಯಗೌಡ ಪಾಟೀಲ ಆ ಅಭಿವೃದ್ಧಿ ಕಾರ್ಯ ಮುನ್ನಡೆಸುತ್ತಿದ್ದಾರೆ. ಅವರು ಇನ್ನೊಮ್ಮೆ ಶಾಸಕರಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮೆರೆಯಬೇಕೆಂದರು.
ಖ್ಯಾತ ವೈದ್ಯ ಡಾ.ಎಂ.ಎಸ್. ಕಲ್ಲೂರ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ತಾವು ಸದಾ ಬದ್ಧರಿರುವುದಾಗಿ ತಿಳಿಸಿದರು. ಶರಣಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಸಿದ್ರಾಯ ಭಾವಿಕಟ್ಟಿ, ಎಸ್. ಬಿ. ಕಲ್ಲೂರ, ಪುಂಡಲಿಕ ಕಪಾಲಿ, ಎಂ.ಐ. ಬಗಲಿ, ಪೀರು ಮನಮಿ, ಮಹಾದೇವಪ್ಪ ಏವೂರ, ಪರಶುರಾಮ ಭಾಸಗಿ ಮತ್ತಿತರರಿದ್ದರು. ಶಿಕ್ಷಕ ಐ.ಎಸ್. ಮಾಶಾಳ ನಿರ್ವಹಿಸಿದರು. ಪ್ರವೀಣ ಮನಮಿ ಪ್ರಾರ್ಥಿಸಿದರು. ಪಿಡಿಒ ಸಿದ್ರಾಮ ಸಿನಿಖೇಡ ವಂದಿಸಿದರು.