ಮೈಸೂರು: ಪುಟಾಣಿಗಳ ಚಿಲಿಪಿಲಿಗೆ ಸಾಕ್ಷಿಯಾಗುವ ‘ಚಿಣ್ಣರ ಮೇಳ’ ಬೇಸಿಗೆ ಶಿಬಿರಕ್ಕೆ ಸೋಮವಾರ ಸಂಜೆ ವನ್ಯಜೀವಿ ತಜ್ಞ ಕೃಪಾಕರ ಅವರಿಂದ ಚಾಲನೆ ದೊರೆಯಿತು.
ಮೈಸೂರು ರಂಗಾಯಣ ವತಿಯಿಂದ ‘ಬಾಲ್ಯ ಅಮೂಲ್ಯ’ ಶೀರ್ಷಿಕೆಯಡಿ ನಡೆಯುವ ಶಿಬಿರವು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನವಾದ ಸೋಮವಾರ ಸಂಜೆ ಉದ್ಘಾಟನೆಗೊಂಡಿತು.
ವಿವಿಧೆಡೆಯಿಂದ ಬಂದಿರುವ ನೂರಾರು ಶಿಬಿರಾರ್ಥಿ ಮಕ್ಕಳು ನಾಟಕ, ನೃತ್ಯ, ಜಾನಪದ ಹೀಗೆ ವಿವಿಧ ಕಲೆಗಳನ್ನು ಇಲ್ಲಿ ಕಲಿಸಿಕೊಡುವ ಮೂಲಕ ಪರಿಚಯಿಸಲಾಗುತ್ತದೆ. ಆರೇಳು ಗಂಟೆ ರಂಗಾಯಣದ ಬೀದಿಯಲ್ಲಿ ಕಾಯ್ದು ಶಿಬಿರದ ಪ್ರವೇಶ ಅರ್ಜಿ ಪಡೆದ ಪಾಲಕರ ಮುಖದಲ್ಲಿ ಮಂದಹಾಸ ಎದ್ದುಕಾಣುತ್ತಿತ್ತು.
ವನ್ಯಜೀವಿ ತಜ್ಞ ಕೃಪಾಕರ ಮಾತನಾಡಿ, ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಸಂವೇದನೆಶೀಲತೆ ಮರೆಯಾಗುತ್ತಿದೆ. ಶಿಕ್ಷಣ ಪದ್ಧತಿ ಕೂಲಿ ಕೆಲಸ ಆಗುತ್ತಿದೆ. ಕಂಪ್ಯೂಟರ್ ಸೈನ್ಸ್ ಡಿಗ್ರಿ ಪಡೆದು ನೌಕರಿ ಹಿಡಿಯುವ ಕಾರ್ಮಿಕರನ್ನು ತಯಾರಿ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಪಾನ್ ಮತ್ತು ಜರ್ಮನಿ ಸೇರಿ ಯೂರೋಪ್ ರಾಷ್ಟ್ರಗಳಲ್ಲಿ 10 ವರ್ಷದ ತನಕ ಮಕ್ಕಳಿಗೆ ಶಾಲೆಯಲ್ಲಿ ಪಠ್ಯಕ್ರಮ ಇರಲ್ಲ. ಜಪಾನ್‌ನಲ್ಲಿ 2ನೇ ತರಗತಿ ಮಕ್ಕಳಿಗೆ ಸಿಗ್ನಲ್ ಲೈನ್ ಕ್ರಾಸ್ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಶಾಲಾ ಆವರಣ, ಶೌಚಗೃಹ ಶುಚಿ ಮಾಡುವ ಹೊಣೆಗಾರಿಕೆ ಕಲಿಸಲಾಗುತ್ತದೆ. ಅವರು ದೇಶಾಭಿಮಾನ ಮತ್ತು ಪ್ರತಿಭೆಯಲ್ಲಿ ನಮಗಿಂತಲೂ ಮುಂದಿದ್ದಾರೆ ಎಂದರು.
ಮೊಬೈಲ್ ಬಳಸುವುದನ್ನೇ ತಮ್ಮ ಮಕ್ಕಳು ಬಹಳ ಬುದ್ಧಿವಂತರೆಂದು ಹೇಳುವ ಪಾಲಕರಿದ್ದಾರೆ. ಬಂಡೀಪುರ, ಮಧುಮಲೈ ಕಾಡಿನಲ್ಲಿ 8 ವರ್ಷದ ಬಾಲಕ ಆನೆಯನ್ನು ನೋಡಿಕೊಳ್ಳುತ್ತಾನೆ. ಅದು ಕೌಶಲ. ಈಗಿನ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಕಳೆದು ಹೋಗುತ್ತಿದ್ದಾರೆ. ಶಾಲೆಯಲ್ಲಿ ಕಲಿಯಬೇಕಾದ್ದು ಕಲಿಯಲಾಗುತ್ತಿಲ್ಲ. ಬಾಲ್ಯದಲ್ಲಿ ಮಕ್ಕಳ ಕಲಿಕೆಯ ಪ್ರಕ್ರಿಯೆ ವ್ಯರ್ಥ ಅನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ತಜ್ಞ ಕೆ.ಮನು, ರಂಗ ಸಮಾಜದ ಸದಸ್ಯ ಸುರೇಶ್‌ಬಾಬು, ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕ ಡಾ ಸುದರ್ಶನ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಇದ್ದರು.