ಮೈಸೂರು: ಶಿಕ್ಷಣದಲ್ಲಿ ಜ್ಞಾನಾರ್ಜನೆ ಜತೆಗೆ ನೈತಿಕ ಮೌಲ್ಯವನ್ನು ಬೆಳೆಸುವುದಕ್ಕೆ ಒತ್ತು ನೀಡಬೇಕು. ಇದು ಸಮಾಜದ ಹಿತದೃಷ್ಟಿಯಿಂದ ಮಹತ್ವದ್ದು ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಎಚ್. ರಾಜಶೇಖರ್ ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಅಭಿವಿನ್ಯಾಸ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಸಮಾಜ, ಸಂಸ್ಥೆ ಮತ್ತು ವಿದ್ಯಾರ್ಥಿ ಸಮುದಾಯ ವ್ಯವಸ್ಥೆಯ ಪ್ರಧಾನ ಭಾಗಗಳಾಗಿವೆ. ಇವುಗಳಲ್ಲಿ ವಿದ್ಯಾರ್ಥಿ ಸಮುದಾಯ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣಕ್ಕೆ ಇವರಿಗೆ ನೀಡುವ ಶಿಕ್ಷಣದ ಬಗ್ಗೆ ಸಮಾಜ ಸದಾ ಜಾಗೃತವಾಗಿರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹೊಸ ಮನಸ್ಸು, ಸ್ವಂತ ಕನಸು ಮತ್ತು ಆದ್ಯತೆಗಳೊಂದಿಗೆ ತಮ್ಮ ಭವಿಷ್ಯ ಉಜ್ವಲವಾಗಬಹುದೆಂಬ ನಿರೀಕ್ಷೆಯೊಂದಿಗೆ ಸಂಸ್ಥೆಗಳನ್ನು ಪ್ರವೇಶಿಸುತ್ತಾರೆ. ವಿದ್ಯಾರ್ಥಿಗಳ ವಿಭಿನ್ನ, ವಿಶಿಷ್ಟ ಆಲೋಚನೆಗಳನ್ನು ಶಿಕ್ಷಣ ಸಂಸ್ಥೆಗಳು ಗುರುತಿಸಿ ಬೆಳಸಬೇಕು. ಈ ನಿಟ್ಟಿನಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಾನ್ವಿತರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯ ಅಧ್ಯಯನಕ್ಕೆ ಪ್ರವೇಶ ಪಡೆದಾಗ ವಿವಿಧ ಆಲೋಚನೆ ಮತ್ತು ಕನಸು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಕಾಲೇಜಿನ ಬಗ್ಗೆ, ಅವರ ಆಯ್ಕೆ ವಿಷಯಗಳು, ಪರೀಕ್ಷಾ ಪದ್ಧತಿ, ಕಾಲೇಜಿನ ನಿಯಮಗಳು ಮುಂತಾದ ಶೈಕ್ಷಣಿಕ ವಿಚಾರಗಳ ಬಗ್ಗೆ ಮಾಹಿತಿ ನೀಡುವುದು ಪ್ರಮುಖವಾದ ಕಾರ್ಯ. ಇದಕ್ಕೆ ಯುಜಿಸಿ ಧೀಕ್ಷಾರಂಭ ಎಂಬ ಕಾರ್ಯಕ್ರಮ ರೂಪಿಸಿದೆ ಎಂದು ತಿಳಿಸಿದರು.
ಧಿಕ್ಷಾರಂಭ ಎಂಬ ಈ ಎರಡು ದಿನದ ಕಾರ್ಯಕ್ರಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ಎಲ್ಲ ಮಾಹಿತಿ ನೀಡುತ್ತದೆ. ಇದು ವಿದ್ಯಾರ್ಥಿಗಳುಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ. ವಿದ್ಯಾರ್ಥಿಗಳು ಕಾಲೇಜಿನ ಸೌಲಭ್ಯ ಸದುಪಯೋಗಪಡಿಸಿಕೊಂಡು ಪಾಲಕರು, ಸಮಾಜದ ಆಶಯವನ್ನು ಸಾಕಾರಗೊಳಿಸಬೇಕು ಎಂದರು.
ಪ್ರಾಂಶುಪಾಲ ಪ್ರೊ.ಎಂ.ಪಿ. ವಿಜಯೇಂದ್ರ, ಐಕ್ಯುಎಸಿ ಸಂಯೋಜಕರಾದ ಡಾ.ರಾಜೇಂದ್ರ ಪ್ರಸಾದ್, ಡಾ. ಕುಮುದಿನಿ ಅಚ್ಚಿ ಇದ್ದರು. 15 ಸ್ನಾತಕೋತ್ತರ ವಿಭಾಗಗಳ ಪ್ರಥಮ ವರ್ಷದ 520 ವಿದ್ಯಾರ್ಥಿಗಳು ಭಾಗವಹಿಸಿದ್ದರು.