ಜಿಲ್ಲೆ

ಶಿಕ್ಷಣದಲ್ಲಿ ಕುವೆಂಪು ದೂರದೃಷ್ಟಿ ಅಡಕಗೊಳ್ಳಲಿ: ಡಾ.ಕೆ.ಚಿದಾನಂದಗೌಡ

ಮೈಸೂರು: ಶಿಕ್ಷಣದ ಕುರಿತು ರಾಷ್ಟ್ರಕವಿ ಕುವೆಂಪು ಹೊಂದಿದ್ದ ದೂರದೃಷ್ಟಿಯ ಆಶಯ ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೈಗೂಡಿಸಿಕೊಳ್ಳಬೇಕಿದೆ ಎಂದು ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ತಿಳಿಸಿದರು.

ಜನಹಿತ ಸಭಾ ವತಿಯಿಂದ ಜಯಲಕ್ಷ್ಮೀಪುರಂನ ಸ್ವಾಮಿವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಲೇಖಕರಾದ ಜಗನ್ನಾಥ ಡಾಂಗೆ, ಆರ್.ಭವ್ಯಾ, ಆರ್.ಜಿ.ಉಷಾ ಅವರ ‘ಕುವೆಂಪು ಅವರ ಶೈಕ್ಷಣಿಕ ಚಿಂತನೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶಿಕ್ಷಣದಲ್ಲಿ ತಾರತಮ್ಯ ಇರಬಾರದು. ಎಲ್ಲರಿಗೂ ಸಮಾನ ಶಿಕ್ಷಣ ದೊರೆಯಬೇಕು. ನೈತಿಕತೆ, ಆದರ್ಶ, ಮೌಲ್ಯ ಆಧಾರಿತ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು’ ಎಂಬುದು ಕುವೆಂಪು ಅವರ ಪ್ರತಿಪಾದನೆಯಾಗಿತ್ತು. ಅವರ ಲೋಕದೃಷ್ಟಿಯ ಆಶಯಗಳು ಎಲ್ಲರ ಹೃದಯದಲ್ಲೂ ಬೆಳಗಬೇಕು ಎಂದರು.

ಶಿಕ್ಷಣ ಎಂದರೆ ಮಾಹಿತಿ ನೀಡುವುದಷ್ಟೇ ಅಲ್ಲ, ಅದು ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ ಆಶಯಗಳು ವಿದ್ಯಾರ್ಥಿಗಳ ಹೃದಯದಲ್ಲಿ ಬಿತ್ತುವ ಶಿಕ್ಷಣವಾಗಬೇಕು ಎಂಬುದು ಕುವೆಂಪು ಅವರ ದೃಢ ನಿಲುವು ಆಗಿತ್ತು. ಜತೆಗೆ, ಮಾತೃಭಾಷೆಯಲ್ಲೇ ಶಿಕ್ಷಣವನ್ನು ಪಡೆದಾಗ ಮಕ್ಕಳಲ್ಲಿ ಸೃಜನಶೀಲ ಮನೋಭಾವ ವೃದ್ಧಿಯಾಗುತ್ತದೆ. ಆದ್ದರಿಂದ ಮಕ್ಕಳ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು ಎಂಬುದು ಕುವೆಂಪು ಅವರ ಅಭಿಮತವಾಗಿತ್ತು ಎಂದು ತಿಳಿಸಿದರು.

ಪರಿಸರದ ಕುರಿತು ಅವರಿಗೆ ಅಗಾಧವಾದ ಒಲವು ಇತ್ತು. ಅದು ಅವರ ಸಾಹಿತ್ಯ ಕೃತಿಗಳಲ್ಲೂ ಪ್ರತಿಬಿಂಬಿತವಾಗಿದೆ. ಅರಣ್ಯ, ಪರಿಸರ ನಾಶದ ಕುರಿತು ಅವರಿಗೆ ತೀವ್ರ ವಿರೋಧ ಇತ್ತು ಎಂದರು

ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಮಂಜುನಾಥ್ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುವೆಂಪು ಪುತ್ರಿ ತಾರಿಣಿ ಚಿದಾನಂದಗೌಡ, ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್, ಲೇಖಕ ಪ್ರೊ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತೇಶಾನಂದಜೀ, ಜನಹಿತ ಸಭಾ ಅಧ್ಯಕ್ಷ ಎಂ.ಮೋಹನ್‌ಕುಮಾರ್ ಇನ್ನಿತರರಿದ್ದರು.