ಜಿಲ್ಲೆ

ಶಿಕ್ಷಣದಿಂದ ಸ್ವಾವಲಂಬಿಯಾಗಲು ಸಾಧ್ಯ: ಸಚಿವ ಡಾ ಕೆ.ಸುಧಾಕರ್ ಅಭಿಪ್ರಾಯ

ಚಿಕ್ಕಬಳ್ಳಾಪುರ : ದೇಶದಲ್ಲಿ ಕನಿಷ್ಠ ವಿದ್ಯಾರ್ಹತೆಯನ್ನು ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ನಿಗದಿಪಡಿಸಬೇಕಾಗಿದೆ ಎಂದು ಸಚಿವ ಡಾ ಕೆ.ಸುಧಾಕರ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.

ಭಾರತದಲ್ಲಿ ಶೇ.30 ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದು ಅನೇಕರು ಎಸ್ಸೆಸ್ಸೆಲ್ಸಿ, ಪಿಯುಸಿ ಹಂತದಲ್ಲಿಯೇ ವಿದ್ಯಾಭ್ಯಾಸದಿಂದ ದೂರ ಉಳಿಯುತ್ತಿದ್ದಾರೆ. ಪ್ರತಿಯೊಬ್ಬರೂ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಭಾರತ ಸ್ವಾವಲಂಬಿ ಮತ್ತು ಉತ್ತಮ ಮಾನವ ಸಂಪನ್ಮೂಲ ಹೊಂದಿರುವ ದೇಶವಾಗುತ್ತದೆ ಎಂದು ತಿಳಿಸಿದರು.

ಮ್ರೈಕ್ರೋಸ್‌ಟಾ ಸಂಸ್ಥೆ ಸಂಸ್ಥಾಪಕ ಬಿಲ್ ಗೇಟ್ಸ್ ಸಂಪಾದಿಸಿರುವ ಸಾಕಷ್ಟು ಹಣದಿಂದ ಆರಾಮವಾಗಿ ಇರಬಹುದು. ಆದರೆ, ಅವರು ವಾರಕ್ಕೆ 5 ಪುಸ್ತಕಗಳನ್ನು ಓದುತ್ತಾರೆ. ಸಂವಿಧಾನ ಶಿಲ್ಪಿ ಗೌರವಕ್ಕೆ ಅಂಬೇಡ್ಕರ್ ಪಾತ್ರರಾಗಲು ಉನ್ನತ ಶಿಕ್ಷಣ ಅಭ್ಯಾಸವೇ ಪ್ರಮುಖ ಕಾರಣ. ಇದಕ್ಕೆ ವಿದ್ಯಾರ್ಥಿಗಳು ಹೆಚ್ಚಿಗೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಜ್ಞಾನಾರ್ಜನೆಯ ಜತೆಗೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿ, ಸ್ಪರ್ಧಾತ್ಮಕ ಕಾಲದಲ್ಲಿ ಹೆಚ್ಚಿನ ಅಧ್ಯಯನ ಮತ್ತು ಕಾರ್ಯ ನಿರ್ವಹಣೆಗೆ ಲ್ಯಾಪ್ ಟ್ಯಾಪ್ ಅಗತ್ಯ. ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. ಆದರೆ, ಇದನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಹೇಳಿದರು.ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಸಭಾ ಸದಸ್ಯ ಗಜೇಂದ್ರ, ಭಾರತಮ್ಮ, ಮುನಿರಾಜು, ಮಾಜಿ ಅಧ್ಯಕ್ಷ ಎಂ.ಮುನಿಕೃಷ್ಣ, ಮಾಜಿ ಸದಸ್ಯ ಕೇಶವಕುಮಾರ್, ಪದ್ಮಮ್ಮ, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಪ್ರಾಂಶುಪಾಲ ಚಂದ್ರಯ್ಯ ಮತ್ತಿತರರು ಇದ್ದರು.

ಲ್ಯಾಪ್‌ಟಾಪ್ ವಿತರಣೆ : ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 238 ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 439 ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ವಿತರಿಸಲಾಯಿತು. ದ್ವಿತೀಯ ಮತ್ತು ತೃತೀಯ ವಿದ್ಯಾರ್ಥಿಗಳಿಗೂ ಕೊಡಬೇಕೆಂಬ ಒತ್ತಾಯ ಕೇಳಿ ಬಂತು. ಇದರ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಸುಧಾಕರ್ ಭರವಸೆ ನೀಡಿದರು.

ಹೊಸ ಕಟ್ಟಡ ಉದ್ಘಾಟನೆ ಶೀಘ್ರ : ಅಣಕೂರು ಬಳಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಮೂರ‌್ನಾಲ್ಕು ವರ್ಷಗಳಿಂದಲೂ ಕೆಲಸ ಕುಂಟುತ್ತ ಸಾಗುತ್ತಿರುವುದರಿಂದ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವಂತಾಗಿದೆ. ಪ್ರತಿ ವಾರ್ಷಿಕೋತ್ಸವದಲ್ಲಿ ಭರವಸೆ ನೀಡಿದರೂ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಕಟ್ಟಡದಲ್ಲಿ 8 ಕೊಠಡಿಗಳ ಕೆಲಸ ಪೂರ್ಣಗೊಂಡಿದ್ದು, ಇನ್ನೂ 7 ಕೊಠಡಿಗಳನ್ನು ನಿರ್ಮಿಸಬೇಕಾಗಿದೆ. ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಮುಂದಿನ ಜುಲೈನಲ್ಲಿ ಕಾಲೇಜು ಕಟ್ಟಡ ಉದ್ಘಾಟನೆಯಾಗಲಿದೆ ಎಂದು ಘೋಷಿಸಿದರು.