ಜಿಲ್ಲೆ

ಶಿಕ್ಷಣದ ಶಕ್ತಿಯಿಂದ ಜ್ಞಾನದ ಬೆಳಕು ಹೆಚ್ಚಾಗಲಿ

ಚಿತ್ರದುರ್ಗ: ಜಿಲ್ಲಾದ್ಯಂತ ಗುರುವಾರ ಶಾಲೆಗಳು ಆರಂಭವಾಗಿದ್ದು,ಮೊದಲ ದಿನದಂದೇ ಮಕ್ಕಳು ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಹೊಸ ಹುರುಪಿನೊಂದಿಗೆ ತರಗತಿಗಳಿಗೆ ಹಾಜರಾದರು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದ ಶಿಕ್ಷಕರು,ಮಕ್ಕಳನ್ನು ಸಂಭ್ರಮದಿಂದ ಬರ ಮಾಡಿಕೊಂಡರು. ಎತ್ತಿನಗಾಡಿಯಲ್ಲಿ ಮೆರವಣಿಗೆ,ಗುಲಾಬಿ ಹೂವು,ಸಮವಸ್ತ್ರ,ಪಠ್ಯಪುಸ್ತಕ ವಿತರಣೆ ಮೊದಲಾದ ಸಡಗರ,ಸಂಭ್ರಮಾಚಾರಣೆ ಮೂಲಕ ಮಕ್ಕಳನ್ನು ಶಾಲೆಗಳಿಗೆ ಸ್ವಾಗತಿಸಲಾಯಿತು.

ಚಿತ್ರದುರ್ಗ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಸಮಾರಂಭ ಮೆದೇಹಳ್ಳಿಯಲ್ಲಿ ಜರುಗಿತು. ಸಿಂಗಾರಗೊಂಡ ಎತ್ತಿನಗಾಡಿ ಯಲ್ಲಿ ಮೆರವಣಿಗೆ ಮೂಲಕ ಮಕ್ಕಳನ್ನು ಕರೆ ತರಲಾಯಿತು. ಮೆರವಣಿಗೆ ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಶಿಕ್ಷಕರು ಪುಷ್ಪಾರ್ಚನೆ ಮಾಡಿ,ಹೂವು,ಬಲೂನ್‌ಗಳನ್ನು ಮಕ್ಕಳಿಗೆ ಕೊಟ್ಟು ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದರು. 1ನೇ ತರಗತಿಗೆ 12 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವುದರ ಮೂಲಕ ದಾಖಲಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ,ಸಮವಸ್ತ್ರ ಕೊಡಲಾಯಿತು.

ಜ್ಞಾನದ ಬೆಳಕು ಹೆಚ್ಚಲಿ

ಶಿಕ್ಷಣವೇ ಶಕ್ತಿ,ಈ ಶಕ್ತಿಯಿಂದ ಜ್ಞಾನ ಬೆಳಕು ಹೆಚ್ಚಾಗಲಿ. ವಿದ್ಯೆ ಉತ್ತಮ ಜೀವನಕ್ಕೆ ಹಾಗೂ ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡ ಲು ಸಹಕಾರಿಯಾಗುತ್ತದೆ ಎಂದು ಡಿಡಿಪಿಐ ಎಂ.ಆರ್.ಮಂಜುನಾಥ್ ಹೇಳಿದರು.

ಚಿತ್ರದುರ್ಗ ತಾಲೂಕು ಮೆದೇಹಳ್ಳಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ಸೇರಿಸಿ,ನಿಯಮಿತವಾಗಿ ಶಾಲೆಗೆ ಕಳುಹಿಸಬೇಕು. ಮಕ್ಕಳಿಗೆ ಉಚಿತ ಸಮ ವಸ್ತ್ರ,ಉಚಿತ ಪಠ್ಯಪುಸ್ತಕ,ವಿದ್ಯಾರ್ಥಿವೇತನ,ಶೂ ಮತ್ತು ಸಾಕ್ಸ್, ಬಿಸಿಯೂಟ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆದು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕೆಂದರು.

ಮೆದೇಹಳ್ಳಿ ಗ್ರಾಪಂ ಅಧ್ಯಕ್ಷೆ ಕಾವ್ಯವಿಜಯಕುಮಾರ್ ಮಾತನಾಡಿ,ಶಿಕ್ಷಣದಿಂದ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗಲಿದೆ. ಗ್ರಾಮದ ಎಲ್ಲ ಅರ್ಹ ಮಕ್ಕಳು ಶಾಲೆಗೆ ದಾಖಲಾಗಿ ವಿದ್ಯಾಭ್ಯಾಸ ಮಾಡಬೇಕು. ಉತ್ತಮ ವ್ಯಕ್ತಿಗಳಾಗಿ ಒಳ್ಳೆಯ ಜೀವನ ನಡೆಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಗ್ರಾಪಂನಿಂದ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ ಶಿವಮೂರ್ತಿ ಮಾತನಾಡಿ,ಮಕ್ಕಳು ವಿದ್ಯೆ ಕಲಿತು ಉತ್ತಮ ಪ್ರಜೆಗಳಾಗಬೇಕೆಂದರು. ಪಿಡಿಒ ಆರ್.ಪಾತಣ್ಣ ಮಾತನಾಡಿ, ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ತಿಳಿಸಿದ ಪ್ರಮುಖ ಅಂಶಗಳನ್ನು ಶೇ.100 ಈಡೇರಿಸುವುದಾಗಿ ತಿಳಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ,ಶಾಲಾ ಮಕ್ಕಳಿಗೆ ಬಿಸಿಯೂಟ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಗ್ರಾಪಂನಿಂದ 8ನೇ ತರಗತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್‌ಗಳನ್ನು ವಿ ತರಿಸಲಾಯಿತು. 2024-25ನೇ ಸಾಲಿನ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಈ ಶಾಲೆಯ 8ನೇ ತರಗತಿಯ ಅತಿಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಸಾಧನೆ ಮಾಡಿದ 6 ವಿದ್ಯಾರ್ಥಿಗಳನ್ನು ಶಿಕ್ಷಕಿ ಅನಿತಾ ಅವರನ್ನು ಗೌರವಿಸಲಾಯಿತು.

ಶಿಕ್ಷಣಾಧಿಕಾರಿ ಸಿದ್ದಪ್ಪ,ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್,ಕ್ಷೇತ್ರ ಸಮನ್ವಯಾಧಿಕಾರಿ ಇ.ಸಂಪತ್‌ಕುಮಾರ್,ಎಸ್‌ಡಿಎಂಸಿ ಅಧ್ಯಕ್ಷೆ ಶ್ವೇತಾ ಹಾಗೂ ಸದಸ್ಯರಾದ ದುಗ್ಗಣ್ಣ,ಶಿವಮೂರ್ತಪ್ಪ,ನಿಂಗಣ್ಣ,ಧನ್ಯಕುಮಾರ್,ಪ್ರಿಯದರ್ಶಿನಿ,ಬಸವರಾಜು,ಲಕ್ಷ್ಮೀದೇವಿ,ಶ್ರೀನಿ ವಾಸ್,ಸುಶೀಲಮ್ಮ,ಶಶಿಕಲಾ,ಸುಲೋಚನಾ,ಎಂ.ಸಿ.ಶಂಕರ್,ಸಿಆರ್‌ಪಿಗಳಾದ ಎಂ.ಎಲ್.ತಿಮ್ಮರಾಜು,ಅಜಯ್‌ಕೋಟೆ,ಮುಖ್ಯಶಿಕ್ಷಕ ಜಿ.ಎನ್.ಅಜ್ಜಪ್ಪ ಇತರರು ಇದ್ದರು.