ವಿಜಯವಾಣಿ ಸುದ್ದಿಜಾಲ ಧಾರವಾಡ
ಹಾನಗಲ್ ಕುಮಾರಸ್ವಾಮಿ, ರಹಿಮತ್‌ಖಾನ ಅಂತಹವರು ಹಲವು ವರ್ಷಗಳ ಹಿಂದೆ ಧಾರವಾಡದ ನೆಲದಲ್ಲಿ ಬಿತ್ತಿದ ಸಂಗೀತದ ಬೀಜದ ಫಲವಾಗಿ ಸಾವಿರಾರು, ಲಕ್ಷಾಂತರ ಕಲಾವಿದರು ಹೊರ ಹೊಮ್ಮಿದ್ದಾರೆ ಎಂದು ರಂಗಕರ್ಮಿ ಡಾ.ಶಶಿಧರ ನರೇಂದ್ರ ಅಭಿಪ್ರಾಯ ಪಟ್ಟರು.
ನಗರ ಕರ್ನಾಟಕ ಆಲೂರು ವೆಂಕಟರಾವ್ ಭವನದಲ್ಲಿ ದರ್ಬಾರ ಸಂಗೀತ ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಎನ್ನುವುದು ನಮ್ಮೆಲ್ಲರಲ್ಲೂ ಹಾಸು ಹೊಕ್ಕಾಗಿದೆ. ನಮ್ಮ ಇಡೀ ದೇಹ ಲಯಕ್ಕೆ, ಸ್ವರಕ್ಕೆ ಪೂರಕ ಸಂಗತಿಗಳನ್ನು ಹೊಂದಿದೆ. ಹೀಗಾಗಿ ನಮಗೆ ತಾಳ, ಲಯದಲ್ಲಿ ವ್ಯತ್ಯಾಸವಾದಾಗ ನಮಗೆ ಅದರ ಅರಿವಾಗುತ್ತದೆ. ಸಂಗೀತಕ್ಕೆ ಭಾಷೆ ಬೇಕಿಲ್ಲ. ಎಲ್ಲ ಸಂಸ್ಕಾರಗಳಿಗೂ ಸಂಗೀತ ತಾಳ ಹಿನ್ನೆಲೆಯಾಗಿ ಬಂದಿದೆ. ಇಡೀ ವಿಶ್ವವೇ ಭಾರತದ ಸಂಗೀತ, ಯೋಗ, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಗಾಯಕ ಪಂ. ಸೋಮನಾಥ ಮರಡೂರ ಮಾತನಾಡಿ, ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಕ್ಷಣ ಜತೆಗೆ ಸಂಗೀತ ಕಲಿಕೆ ಅತ್ಯವಶ್ಯ. ದೇಶ-ವಿದೇಶಗಳಿಂದ ಹಿಂದೂಸ್ತಾನಿ ಸಂಗೀತ ಅರಸಿ ನಗರಕ್ಕೆ ಬರುತ್ತಿರುವುದು ಹೆಮ್ಮೆ ಸಂಗತಿ. ಸಂಗೀತ ಕಲೆ ಉಳಿಸಿ, ಬೆಳೆಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ದರ್ಬಾರ ಸಂಗೀತ ಕಲಾ ಸಂಸ್ಥೆ ಅಧ್ಯಕ್ಷ ಬಸವರಾಜ ಹೂಗಾರ ಅವರನ್ನು ಶಿಷ್ಯವರ್ಗ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು. ಡಾ.ಅರ್ಜುನ ವಠಾರ, ಡಾ. ಶ್ರೀಧರ ಕುಲಕರ್ಣಿ ಮತ್ತು ಶೃತಿ ಕುಲಕರ್ಣಿ ಗಾಯನ ಹಾಗೂ ಡಾ. ಗುರುಬಸವ ಮಹಾಮನೆ ವಯೋಲಿನ, ಶ್ರೀಧರ ಭಜಂತ್ರಿ ಶಹನಾಯಿ ವಾದನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಮಳೆಮಲ್ಲೇಶ ಹೂಗಾರ, ಡಾ.ರಾಜಕುಮಾರ ಮುಡಬಿ, ಹಾರ್ಮೊನಿಯಂದಲ್ಲಿ ಪ್ರಮೋದ ಹೆಬ್ಬಳ್ಳಿ ಸಾಥ್ ನೀಡಿದರು.
ವೀರಣ್ಣ ಪತ್ತಾರ, ಪಂ.ಸಾತಲಿಂಗಪ್ಪ ಹೂಗಾರ, ಪ್ರಕಾಶ ಬಾಳಿಕಾಯಿ, ಪಂ. ಕುಮಾರ ಮರಡೂರ, ಡಾ.ಶ್ರೀಧರ ಕುಲಕರ್ಣಿ, ವಿದ್ಯಾರ್ಥಿಗಳು, ಇತರರು ಇದ್ದರು. ಬಸವರಾಜ ಹೂಗಾರ ಸ್ವಾಗತಿಸಿದರು. ಸಹನಾ ಬನಸೂಡೆ ನಿರೂಪಿಸಿದರು. ಮಳೆಮಲ್ಲೇಶ ಹೂಗಾರ ವಂದಿಸಿದರು.