ಬಸವಕಲ್ಯಾಣ: ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳಲ್ಲಿ ಆದರ್ಶ ಮೌಲ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೇಳಿದರು.
ರಾಜೇಶ್ವರ ಗ್ರಾಮದ ಭಗತಸಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ೧೩ನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಗುಣಮಟ್ಟದ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ಅವಶ್ಯಕ. ಮಕ್ಕಳಿಗಾಗಿ ಆಸ್ತಿ ಮಾಡದೇ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಲು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ಶಂಕರಪ್ರಭು ಜಂಜೀರೆ, ಪ್ರಮುಖರಾದ ಚಂದ್ರಮ್ಮ ಮಹೇಂದ್ರಕರ, ಕೇಶಪ್ಪ ಬಿರಾದಾರ , ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮಹೇಂದ್ರಕರ್, ಅಶೋಕ ಮಹೇಂದ್ರಕರ್, ಅಂಬಣ್ಣ ಘಾಂಗ್ರೆ, ಡಾ. ಗಜಾನನ ಐನಾಪುರೆ, ಮುಖ್ಯಗುರು ಪ್ರಿಯಾಂಕಾ ಜಂಜೀರ, ಪ್ರಕಾಶ ಹಿಪ್ಪರಗಾ, ಡಾ.ಅರುಣ ಕುರ್ಣೆ, ರಾಜಕುಮಾರ ಮುಲಗೆ ಇತರರಿದ್ದರು.