ಶೃಂಗೇರಿ: ಹಿರಿಯರ ಬದುಕಿನ ಅನುಭವದ ಸಾರವೇ ಜನಪದ. ನಾವು ಯುವಪೀಳಿಗೆಗೆ ಶಿಕ್ಷಣದ ಜತೆಗೆ ಜಾನಪದ ಸಂಸ್ಕೃತಿ ಅರಿವು ಮೂಡಿಸುವ ಅವಶ್ಯಕತೆ ಇದೆ. ಆದ್ದರಿಂದ ಎಲ್ಲ ಶಾಲಾ ಕಾಲೇಜುಗಳಲ್ಲಿ ಜಾನಪದ ಕಲೆಯನ್ನು ವೇದಿಕೆಗಳಲ್ಲಿ ಅನಾವರಣಗೊಳಿಸುವ ಮೂಲಕ ಜಾನಪದ ಸಂಸ್ಕೃತಿ ಉಳಿಸಬೇಕಿದೆ ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.
ಜೆಸಿಬಿಎಂ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕನ್ನಡ ಜಾನಪದ ಪರಿಷತ್ ಆಯೋಜಿಸಿದ ಜನಪದ ಕಲಿಕೆಯ ನಾಲ್ಕು ದಿನದ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ‘ಜಾನಪದದಲ್ಲಿರುವ ತತ್ವ ಮತ್ತು ಸತ್ವ’ ಎಂಬ ವಿಷಯದ ಕುರಿತು ಮಾತನಾಡಿದರು.
ಜಾನಪದದಲ್ಲಿ ಸತ್ಯ, ತ್ಯಾಗ ಮತ್ತು ಅಹಿಂಸೆ ಮುಂದೆ ಕ್ರೌರ್ಯ ಸೋಲುತ್ತದೆ. ದೃಶ್ಯ ಮಾಧ್ಯಮ ಮತ್ತು ಸಿನಿಮಾದಿಂದ ಜಾನಪದ ಸಂಸ್ಕೃತಿ ನಶಿಸುತ್ತಿದೆ. ಜಾನಪದ ತತ್ವ ಪದಗಳು ಬರವಣಿಗೆ ಮೂಲಕ ಚಾಲ್ತಿಗೆ ಬಂದಿದೆ. ಪ್ರಸ್ತುತ ರಾಜಕೀಯವು ನಮ್ಮೆಲ್ಲರ ಮನಸ್ಸುಗಳನ್ನು ಒಡೆಯುತ್ತಿದೆ. ಆದರೆ ಜಾನಪದ ಸಂಸ್ಕೃತಿ ಮನಸ್ಸುಗಳನ್ನು ಒಗ್ಗೂಡಿಸುತ್ತಿದೆ. ಜನರ ಬದುಕಿನ ಸಂತೋಷ, ಸಂಕಷ್ಟ, ಪ್ರೀತಿಯನ್ನು ಹಾಡಿನ ಮೂಲಕ ಲಕ್ಷಾಂತರ ಜನರು ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಚುರ ಪಡಿಸಿದರು. ಅಂತಹ ಜಾನಪದ ಗೀತೆಗಳು ಶಾಶ್ವತವಾಗಿ ಸಮುದಾಯದಲ್ಲಿ ನೆಲೆಯೂರಬೇಕಿದೆ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಓಣಿತೋಟ ರತ್ನಾಕರ್ ಮಾತನಾಡಿ, ಯುವ ಪೀಳಿಗೆ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಹಿತ್ಯಕ್ಕೆ ಬದುಕನ್ನು ಉತ್ತಮವಾಗಿ ರೂಪಿಸುವ ಶಕ್ತಿ ಇದೆ. ಜಾನಪದ ಸಂಸ್ಕೃತಿಯಲ್ಲಿ ಆಡಂಬರವಿಲ್ಲ ಸಂಭ್ರಮವಿದೆ. ಅದು ಜ್ಞಾನ ತುಂಬಿದ ಕಣಜ. ಜಾನಪದ ಸೊಗಡನ್ನು ಸಮುದಾಯದಲ್ಲಿ ಬಿತ್ತರಿಸುವ ಕಾಯಕದಲ್ಲಿ ಸರ್ವರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದರು.
ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಆಶೀಶ್ ದೇವಾಡಿಗ ಮಾತನಾಡಿ, ದಾರಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿದಾರಿಗೆ ತರಲು ಸಾಹಿತ್ಯ ಸಹಕಾರಿ. ಜಾನಪದ ನಮ್ಮ ಬದುಕಿನ ಮೌಲ್ಯ ಹೆಚ್ಚಿಸುತ್ತದೆ. ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ಅವರಿಗಾಗಿ ಆಸ್ತಿ ಮಾಡುವ ಬದಲು ಅವರನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದರು.
ಪೊಲೀಸ್ ಉಪ ಠಾಣಾಧಿಕಾರಿ ಮೋಹನ್ ರಾಜಣ್ಣ, ಪಪಂ ಅಧ್ಯಕ್ಷ ವೇಣುಗೋಪಾಲ್, ಕಾಲೇಜಿನ ಪ್ರಭಾರ ಪ್ರಾಚಾರ್ಯ ಯೋಗೇಶ್ವರ್, ಎ.ಜಿ ಪ್ರಶಾಂತ್, ನಾಗೇಂದ್ರ, ಜಾಲ್ಮರ ಸುಬ್ರಾವ್, ಪ್ರದೀಪ್ ಯಡದಾಳು, ಶಿವಾನಂದ ರಾವ್, ವಿ.ಎಸ್.ಅಶೋಕ್, ಸಂತೋಷ್, ಶೂನ್ಯ ರಮೇಶ್, ಜಲಜಾ ಇದ್ದರು.