ಶೃಂಗೆರಿಯಲ್ಲಿ ಆಯೋಜಿಸಿದ್ದ ನುಡಿನಿತ್ಯೋತ್ಸವ ಸಮಾರಂಭದಲ್ಲಿ ಸಂಸ್ಕೃತಿ ಚಿಂತಕ ವಗಳೆ ನಾಗೇಂದ್ರ ಭಟ್ ಅವರನ್ನು ಗಣ್ಯರು ಗೌರವಿಸಿದರು. ಟಿ.ವಿ.ಕೃಷ್ಣಮೂರ್ತಿ, ಆನಂದಸ್ವಾಮಿ, ಸಂತೋಷ್‌ಕುಮಾರ್ ಇತರರಿದ್ದರು. 
ಜಿಲ್ಲೆ

ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಮೌಲ್ಯಕ್ಕೂ ಆದ್ಯತೆ ನೀಡಿ

ಶೃಂಗೇರಿ: ಭಗವಂತನನ್ನು ಆರಾಧಿಸುವಾಗ ನಾವು ಭಕ್ತಿಯಿಂದ ಹಾಡುವ ಗೀತೆಗಳಲ್ಲಿನ ಸಾಹಿತ್ಯಅಧ್ಯಾತ್ಮದ ಸಾಕ್ಷೀಕರಣಕ್ಕೆ ಪೂರಕವಾಗಿರಬೇಕು ಎಂದು ಸಂಸ್ಕೃತಿ ಚಿಂತಕ ವಗಳೆ ನಾಗೇಂದ್ರ ಭಟ್ ಹೇಳಿದರು.

ಶುಕ್ರವಾರ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ನುಡಿನಿತ್ಯೋತ್ಸವ ಸಮಾರಂಭದಲ್ಲಿ ಎಸ್.ವಿ.ರಾಮಚಂದ್ರ ಭಟ್ ದತ್ತಿ ಉಪನ್ಯಾಸದಲ್ಲಿ ಆಧ್ಯಾತ್ಮಿಕ ಚಿಂತನೆ ಕುರಿತು ಉಪನ್ಯಾಸ ನೀಡಿದರು.

ಹುಣಸೂರು ಕೃಷ್ಣಮೂರ್ತಿ, ಚಿ.ಉದಯ್‌ಶಂಕರ್ ರಚಿಸಿದ ಗೀತೆಗಳಲ್ಲಿ ಸಾಹಿತ್ಯ ಪ್ರಧಾನ ಗೀತೆಗಳು ಇಂದಿಗೂ ಜನಮಾನಸದಲ್ಲಿ ಶಾಶ್ವತ ಸ್ಥಾನಗಳಿಸಿವೆ. ಹಿರಿಯ ಕವಿಗಳು ರಚಿಸಿದ ಸಾಹಿತ್ಯದಲ್ಲಿ ಪಾರಂಪರಿಕ ಮೌಲ್ಯಗಳ ಸಾರವಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆ ಆಧ್ಯಾತ್ಮಿಕ ಮೌಲ್ಯದ ಪ್ರಾಮುಖ್ಯತೆ ಅರಿತುಕೊಳ್ಳಬೇಕು. ಆಧ್ಯಾತ್ಮ ನಮ್ಮ ಧರ್ಮದ ಚಿಲುಮೆ. ನಾವು ರಚಿಸುವ ಸಾಹಿತ್ಯಗಳಲ್ಲಿ ಗಂಭೀರ ವಿಚಾರ ಸರಣಿಗಳು ಇದ್ದಾಗ ಮಾತ್ರ ಅತ್ಯುನ್ನತ ಸಂದೇಶಗಳು ಜನಸಾಮಾನ್ಯರನ್ನು ತಲುಪಲು ಸಾಧ್ಯ ಎಂದರು.

ಪಪಂ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಕನ್ನಡ ಭಾಷೆ, ನಾಡು, ನುಡಿಯ ಆಚರಣೆಗಳು ನವೆಂಬರ್‌ಗೆ ಸೀಮಿತವಾಗಿರ ಬಾರದು. ಕನ್ನಡ ಭಾಷೆ ಬೆಳೆಯಬೇಕು ಎಂಬ ಭಾವ ಸರ್ವರಲ್ಲಿ ಪರಿಮೂಡಿದಾಗ ಭಾಷಾ ಬೆಳವಣಿಗೆ ಸಾಧ್ಯ. ಕನ್ನಡ ಭಾಷಾಭಿಮಾನ ಜತೆ ದೇಶಾಭಿಮಾನವೂ ಅಗತ್ಯ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ದತ್ತಿದಾನಿ ಗಾಯತ್ರಿ ಭಟ್, ಶಾಲಾ ಮುಖ್ಯಶಿಕ್ಷಕ ಯು.ಪಿ.ಸಂತೋಷ್ ಕುಮಾರ್, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದ ಸ್ವಾಮಿ ಇದ್ದರು.