ಬಸವಕಲ್ಯಾಣ: ಶಿಕ್ಷಣದ ಜತೆಯಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಪಾಲಕರು ಕಾಳಜಿ ವಹಿಸಬೇಕು. ಮಕ್ಕಳು ಕಲಿಕೆಯ ಜತೆಗೆ ಆದರ್ಶ ಮೌಲ್ಯಬೆಳೆಸಿಕೊಳ್ಳಬೇಕು. ಗುರು ಹಿರಿಯಗೆ ಗೌರವ ಕೊಡಬೇಕು ಎಂದು ಐನಾಪುರನ ಪ್ರವಚನಕಾರ ಮಲ್ಲಯ್ಯ ಶಾಸ್ತ್ರಿ ಹೇಳಿದರು.
ನಗರದ ಬನಶಂಕರಿ ಓಣಿ ಶ್ರೀ ಬನಶಂಕರಿ ದೇವಿಯ ೪೫ನೇ ಜಾತ್ರೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಪ್ರವಚನದ ಸಮಾರೋಪ ಸಮಾರಭದಲ್ಲಿ ಪ್ರವಚನ ನೀಡಿದ ಅವರು, ಜೀವನದಲ್ಲಿ ಆದರ್ಶ ಮೌಲ್ಯ ಬೆಳೆಸಿಕೊಂಡವರು. ನಡೆ-ನುಡಿ ಒಂದಾಗಿಸಿಕೊಂಡು ಕಷ್ಟ-ಸುಖದಲ್ಲಿಯೂ ಸಮಭಾವದಿಂದ ಇರುವವರು ಹಾಗೂ ಇತರರನ್ನು ಗೌರವದಿಂದ ಕಾಣುವವರೇ ನಿಜವಾದ ಜ್ಞಾನಿಗಳು ಎಂದು ವಿಶ್ಲೇಷಿಸಿದರು.
ಹೈದರಾಬಾದ್‌ನ ನರರೋಗ ತಜ್ಞ ಡಾ.ಸಂಜುಕುಮಾರ ಮುನ್ನೋಳಿ ಮಾತನಾಡಿ, ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಆದರೆ ಇದನ್ನು ಗುರಿತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು. ಮಾತೃ ಭಾಷೆಯ ಬಗ್ಗೆ ಗೌರವ ಅಭಿಮಾನ ಎಲ್ಲರಲ್ಲಿಯೂ ಇರಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತು ಸಾಧನೆ ಮಾಡಿದ ಪ್ರಗತಿಭಾವಂತರು ಸಾಕಷ್ಟಿದ್ದಾರೆ ಎಂದರು.
ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೀರೆ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ನೌತಿಕ ಮೌಲ್ಯಬೆಳೆಸಿಕೊಳ್ಳಬೇಕು. ಶ್ರಮ ವಹಿಸಿ ಅಭ್ಯಾಸ ಮಾಡುವ ಜತೆಗೆ ಸ್ಪರ್ಧಾತ್ಮಕ ಮನೋಭವ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಪಂಚ ಕಮಿಟಿ ಅಧ್ಯಕ್ಷ ಡಾ.ಜಿ.ಎಸ್.ಭುರಳೆ ಮಾತನಾಡಿ, ದಿನನಿತ್ಯದ ಕೆಲಸ ಕಾರ್ಯಗಳಿಂದಾಗಿ ಒತ್ತಡದ ಜೀವನ ಶೈಲಿಯಲ್ಲಿ ಮನುಷ್ಯನಿಗೆ ನೆಮ್ಮದಿಯ ಅವಶ್ಯಕತೆ ಇದ್ದು, ಪುರಾಣ, ಪ್ರವಚನಗಳು ಮನಸ್ಸನ್ನು ಶುದ್ಧಗೊಳಿಸುವ ಮೂಲಕ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗುತ್ತವೆ ಎಂದರು.
ಬಿಕೆಇಸಿ ಉಪ ಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ್, ಬಿಕೆಐಟಿಐ ಪ್ರಾಚಾರ್ಯ ಶಿವಕುಮಾರ ಹಿರೇಮಠ, ಕಿರಣ ಆರ್ಯ, ಬಸಣ್ಣ ಧನ್ನೂರೆ, ಪಂಚ ಕಮಿಟಿ ಉಪಾಧ್ಯಕ್ಷ ಶರಣಪ್ಪ ಮೆಂಗದೆ, ಕಾರ್ಯದರ್ಶಿ ದಿಲೀಪ ರುಮ್ಮಾ, ಜಂಟಿ ಕಾರ್ಯದರ್ಶಿ ಬಸವಂತಪ್ಪ ಭುರಳೆ, ಶಿವಶಂಕರ ಗಂಜಿ, ಬಸವರಾಜ ಬಂದಗೆ, ಬಾಬು ಹೆಗ್ಗೆ, ಕಾಶಪ್ಪ ಕಡಗಂಚಿ, ಬಸವರಾಜ ಬಂದಗೆ, ಸುರೇಶ ಅಡಕೆ, ಅಶೋಕ ಹಿಪ್ಪರಗೆ, ಸೋಮನಾಥ ಮತಗುಂಡೆ, ಶಾಂತು ಮೆಂಗದೆ, ಮಲ್ಲಪ್ಪ ಕಡಗಂಚಿ, ಶಂಕರ ಮ್ಯಾಕಾ, ಗೋವಿಂದ ಕನಕಾ, ಸೂರ್ಯಕಾಂತ ಭುರಳೆ, ಮಹಾದೇವ ಹುಡಗೆ, ಸಚಿನ ಹುಡಗೆ, ಸುಶೀಲಾಬಾಯಿ ಧನ್ನೂರೆ ಇತರರಿದ್ದರು.
ಸುರೇಶ ಅಡಕೆ ಸ್ವಾಗತಿಸಿ ನಿರೂಪಣೆ ಮಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಕುಂಭಮೇಳಕ್ಕೆ ಚಾಲನೆ: ಜಾತ್ರೋತ್ಸವದ ನಿಮಿತ್ತ ಭಾನುವಾರ ನಡೆದ ಕುಂಭಮೇಳಕ್ಕೆ ನಗರಸಭೆ ಸದಸ್ಯೆ ರೇಖಾಬಾಯಿ ಮೇತ್ರಸ್ಕರ್ ಹಾಗೂ ಹೈಕೋರ್ಟ್ ನ್ಯಾಯವಾದಿ ಸ್ವಾತಿ ಸುಂಠನೂರೆ ಚಾಲನೆ ನೀಡಿದರು. ಶ್ರೀ ಬನಶಂಕರಿ ದೇವಿಯ ಭಾವಚಿತ್ರದೊಂದಿಗೆ ದೇವಸ್ಥಾನದಿಂದ ಕೋಟೆ, ಗಾಂಧಿ, ವೃತ್ತದ ಮಾರ್ಗವಾಗಿ ದೇವಸ್ಥಾನದವರೆಗೆ ನಡೆದ ಕುಂಭ ಮೇಳದಲ್ಲಿ ಮಹಿಳೆಯರು ಭಕ್ತಿ-ಶೃದ್ದೆಯಿಂದ ಭಾಗವಹಿಸಿದ್ದರು. ಸಂಜೆ ದೇವಸ್ಥಾನದಲ್ಲಿ ತೊಟ್ಟಿಲು ಕಾರ್ಯಕ್ರಮ ಜರುಗಿತು. ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಕುಂಕುಮಾರ್ಚನೆ ನಡೆದರೆ, ಶುಕ್ರವಾರ ಸಂಜೆ ಶ್ರೀ ಬನಶಂಕರಿ ಯುಥ್ ಕ್ಲಬ್ ನೇತೃತ್ವದಲ್ಲಿ ದೀಪೋತ್ಸವ ಜರುಗಿತು. ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು.
ಇಂದು ರಥೋತ್ಸವ: ಬನಶಂಕರಿ ದೇವಿ ಜಾತ್ರೋತ್ಸವದ ನಿಮಿತ್ತ ಸೋಮವಾರ ಸಂಜೆ ೭ಕ್ಕೆ ಅದ್ದೂರಿ ರಥೋತ್ಸವ ಜರುಗಲಿದೆ.