ಮೈಸೂರು: ವಿದ್ಯೆ ಎಂಬುದು ಅಭ್ಯಸಿಸುವವರ ಸ್ವತ್ತಾದರೆ, ಜ್ಞಾನ ಎಂಬುದು ಸಾಧಕನ ಸ್ವತ್ತು ಎಂದು ಚಿಂತಕ ಶಂಕರ ದೇವನೂರು ಹೇಳಿದರು.
ನಗರದ ಬಿಜಿಎಸ್ ಬಿ .ಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ಯೋತಿ ಎಂಬುದು ನಮ್ಮ ಪರಂಪರೆಯ ಬೆಳಕಿನ ಸಂಕೇತ. ಬದುಕು ಬೆಳಕಾಗಬೇಕು. ಆದರೆ ಇಂದು ದ್ವೇಷದ ದಳ್ಳುರಿಯಲ್ಲಿ ಜಗತ್ತು ಬೇಯುತ್ತಿದೆ ಎಂದರು.
ನೀರಿನಲ್ಲಿ ಈಜುವ ಮೀನು ಹಾರಲು ಯತ್ನಿಸಿದರೆ ಹಾರುವ ಹಕ್ಕಿಗೆ ಆಹಾರವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಧನೆಗೆ ಅಣಿಯಾಗಬೇಕು. ಶಿಕ್ಷಣವೆಂಬ ಅಸ್ತ್ರವನ್ನು ಪ್ರತಿಯೊಬ್ಬರೂ ತಮ್ಮ ಸಾಧನೆಗೆ ಪೂರಕ ಸಾಧನವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಸಚಿವಾಲಯದ ನಿವೃತ್ತ ಪ್ರಧಾನ ಆಯುಕ್ತ ಜಿ. ನಾರಾಯಣಸ್ವಾಮಿ ಮಾತನಾಡಿ, ಸಾಧನೆಗೆ ಮೂಲ ಪ್ರೇರಣೆ ಎಂದರೆ ನಿಜವಾದ ಬಡತನ. ನಾವು ನಮ್ಮ ಬಗ್ಗೆ ನಂಬಿಕೆ ಇಡುವುದು ಸಾಧನೆಯ ಮೊದಲು ಮೆಟ್ಟಿಲು ಎಂದು ಹೇಳಿದರು.
ತಂದೆ-ತಾಯಿ ಮತ್ತು ಶಿಕ್ಷಕರು ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿಗಳಾಗಿದ್ದಾರೆ. ನಾವು ಮಾಡುವ ಕಾಯಕವನ್ನು ಪ್ರೀತಿಯಿಂದ ಆನಂದದಿಂದ ಮಾಡಬೇಕು. ಆಗ ಮಾತ್ರ ನಾವು ಸಾಧಿಸಲು ಸಾಧ್ಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯುಪಿಎಸ್‌ಸಿಯಲ್ಲಿ 263ನೇ ರ‌್ಯಾಂಕ್ ಗಳಿಸಿದ ಎ.ಸಿ.ಪ್ರೀತಿ, ನಾವು ಓದುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ನಮ್ಮ ವ್ಯಕ್ತಿತ್ವ ಮತ್ತು ಚಾರಿತ್ರೃ ಉಳಿಸಿಕೊಳ್ಳುವುದು. ಏಕೆಂದರೆ ಅಪ್ಪ -ಅಮ್ಮ ನಮ್ಮನ್ನು ನಂಬಿ ಶಾಲಾ, ಕಾಲೇಜುಗಳಿಗೆ ಕಳುಹಿಸುತ್ತಾರೆ. ನಾವು ಪಾಲಕರ ಗೌರವಕ್ಕೆ ಧಕ್ಕೆ ಆಗದ ಹಾಗೆ ನಡೆದುಕೊಳ್ಳುವುದು ಅತಿ ಮುಖ್ಯ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಕ್ಷಕರ ವೃತ್ತಿ ಅತಿ ಪವಿತ್ರವಾದದ್ದು. ನನ್ನ ಯಶಸ್ಸಿಗೆ ನನ್ನ ಶಿಕ್ಷಕರ ಸಲಹೆ ಮಾರ್ಗದರ್ಶನ ಕಾರಣವಾಯಿತು. ತಾನು ಕೃಷಿಕ ಕುಟುಂಬದ ಹೆಣ್ಣು ಮಗಳು. ತನ್ನ ತಂದೆ ಅಡುಗೆ ಕೆಲಸ ಮಾಡುತ್ತಾರೆ. ಇದು ನನಗೆ ಹೆಮ್ಮೆಯ ಸಂಗತಿ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮೈಸೂರು ಶಾಖೆಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಗುರಿಯನ್ನು ಇಟ್ಟುಕೊಂಡು ಯಾರೂ ದೃಢವಾದ ಹೆಜ್ಜೆಯನ್ನು ಇಡುತ್ತಾರೆಯೋ ಅವರು ಆ ಗುರಿ ಮುಟ್ಟುತ್ತಾರೆ. ಸಾಧನೆ ಮಾಡುವಾಗ ಹಲವು ತೊಂದರೆಗಳು ಸಹಜವಾಗಿ ಎದುರಾಗುತ್ತವೆ. ಇವುಗಳನ್ನು ಮೆಟ್ಟಿ ನಿಂತಾಗ ಗುರಿ ಸಾಧಿಸಬಹುದು ಎಂದು ಹೇಳಿದರು. ಪ್ರಾಂಶುಪಾಲ ಡಾ.ನಾಗರಾಜು, ಆಡಳಿತಾಧಿಕಾರಿ ಯಶೋದಾ ಇದ್ದರು.