ಚನ್ನರಾಯಪಟ್ಟಣ: ಶಿಕ್ಷಣದ ಜತೆಗೆ ದೈಹಿಕ ಶಿಕ್ಷಣವು ಬಹು ಮುಖ್ಯವಾದುದು. ಶಿಕ್ಷಣಕ್ಕೆ ನೀಡುವಷ್ಟು ಮಹತ್ವವನ್ನು ಕ್ರೀಡೆಗಳಿಗೆ ಕೊಡಬೇಕು. ಮನಸ್ಸು ಮತ್ತು ದೇಹ ಸದೃಢವಾಗಲು ಈ ಕ್ರೀಡೆಗಳು ವಿಶೇಷವಾಗಿ ಸಹಕಾರಿ ಆಗುತ್ತವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ಚನ್ನರಾಯಪಟ್ಟಣ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಶ್ರವಣಬೆಳಗೊಳದ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಗೆಲ್ಲಲೇ ಬೇಕೆಂಬ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವಲ್ಲಿ ಕಠಿಣ ಪರಿಶ್ರಮ ಅಗತ್ಯವೆಂದರು.
ಪುರಸಭಾ ಸದಸ್ಯರಾದ ರೇಖಾ ಅನಿಲ್, ಬನಶಂಕರಿ ರಘು, ಎಸ್‌ಡಿಎಂಸಿ ಉಪಾಧ್ಯಕ್ಷರಾದ ಬೋರೇಗೌಡ, ಬರಾಳು ಮಹೇಂದ್ರ, ಪ್ರಾಂಶುಪಾಲರಾದ ರಾಮೇಗೌಡ, ಕಾಂತರಾಜು, ದೈಹಿಕ ಪರೀವೀಕ್ಷಕ ಮಹದೇವ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ್, ಬರಾಳು ಶಿವರಾಮ್ ಇತರರು ಹಾಜರಿದ್ದರು.