ಜಿಲ್ಲೆ

ಶಿಕ್ಷಣಕ್ಕಿಂತ ಜೀವನಾನುಭವ ಶ್ರೇಷ್ಠ

ಚಿತ್ರದುರ್ಗ: ಶಿಕ್ಷಣಕ್ಕಿಂತಲೂ ಜೀವನಾನುಭವ ಅತ್ಯಂತ ಶ್ರೇಷ್ಠ ಎಂದು ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ಹೇಳಿದರು.

ದಾವಣಗೆರೆ ವಿವಿ, ಬಾಪೂಜಿ ಸಮೂಹ ಸಂಸ್ಥೆಗಳು, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಿಂದ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಆಗಿದ್ದಾಗ ಕಲಿಯುವ ಶಿಸ್ತು ಜೀವನವಿಡಿ ಮುಂದುವರೆಸಿ. ಶಿಕ್ಷಣದ ಜೊತೆ ಸಂಸ್ಕಾರ, ಜ್ಞಾನ, ಆರ್ಥಿಕ ಸಬಲತೆ ಸಾಧಿಸಲು ಮುಂದಾಗಬೇಕು. ಪೌರ ಮತ್ತು ಪರಿಸರ ಪ್ರಜ್ಞೆ ಎಲ್ಲರಲ್ಲೂ ಇರಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಡಿವೈಎಸ್‌ಪಿ ಸೈಯದ್ ಇಸಾಕ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಆತ್ಮವಿಶ್ವಾಸ ಇಲ್ಲದಿದ್ದರೆ, ಜೀವನದಲ್ಲಿ ಏನನ್ನು ಸಾಧಿಸಲು ಆಗುವುದಿಲ್ಲ. ಕೇವಲ ಪದವಿಗಾಗಿ ಓದುವುದಕ್ಕಿಂತ ಹೆಚ್ಚಾಗಿ ಸಾಮಾನ್ಯ ಜ್ಞಾನಕ್ಕಾಗಿ ದಿನಪತ್ರಿಕೆ, ಇನ್ನಿತರೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಶಿಬಿರಾಧಿಕಾರಿ ಡಾ.ಹನುಮಂತರೆಡ್ಡಿ, ಪ್ರಾಚಾರ್ಯೆ ಪ್ರೊ.ಎಂ.ಆರ್.ಜಯಲಕ್ಷ್ಮಿ, ಉಪ ಪ್ರಾಚಾರ್ಯ ಪ್ರೊ.ಎಚ್.ಎನ್.ಶಿವಕುಮಾರ್ ಇದ್ದರು.