ಮೈಸೂರು: ಶಿಕ್ಷಣ ಸಂಸ್ಥೆಗಳು ರಾಜಕೀಯ ವ್ಯವಸ್ಥೆಯನ್ನು ಮೈಲಿಗೆ ರೀತಿಯಲ್ಲಿ ನೋಡುತ್ತಿರುವ ಪರಿಣಾಮ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಕೊರತೆ ಕಂಡು ಬರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಹೊಸಮಠದ ನಟರಾಜ ಸಭಾಂಗಣದಲ್ಲಿ ಶ್ರೀ ನಟರಾಜ ಪ್ರತಿಷ್ಠಾನ, ನಟರಾಜ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶರಣ ಜ್ಯೋತಿ ಪ್ರಸಾರಾಂಗ ಉದ್ಘಾಟನೆ ಮತ್ತು ಡಾ.ಎಸ್.ಶಿವರಾಜಪ್ಪ ರಚನೆಯ ಗಾಂಧಿ ರಸಪ್ರಶ್ನೆಗಳು ಮತ್ತು ಭಜನ್ಸ್ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಯಬೇಕಾದರೆ ಅವರಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಚಿಂತನೆ ಮತ್ತು ಚಟುವಟಿಕೆ ಗಳಿಗೆ ಆದ್ಯತೆ ನೀಡುವುದು ಅನಿವಾರ್ಯ. ಬಹುತೇಕ ವಿದ್ಯಾರ್ಥಿಗಳಿಗೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ ಎಂಬ ಅರಿವೇ ಇಲ್ಲ ಎಂದು ಹೇಳಿದರು.
ಒಂದು ಶಿಕ್ಷಣ ಸಂಸ್ಥೆ ಪ್ರಸಾರಾಂಗವನ್ನು ಪ್ರಾರಂಭ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅಂತಹ ಒಂದು ಕೆಲಸವನ್ನು ನಟರಾಜ ಸಂಸ್ಥೆ ಮಾಡಿರುವುದು ಶ್ಲಾಘನೀಯವಾದುದು. ಜನತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವು ರಾಷ್ಟ್ರದ ಬಗ್ಗೆ ತಿಳಿಯಬೇಕು. ಇದರಲ್ಲಿ ಸರ್ಕಾರದ ಜತೆಗೆ ಶಿಕ್ಷಣ ಸಂಸ್ಥೆಗಳ ಪಾತ್ರ ದೊಡ್ಡದು ಎಂದರು.
ಶರಣ ಜ್ಯೋತಿ ಪ್ರಸಾರಾಂಗದ ಲಾಂಛನ ಬಿಡುಗಡೆ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ನೆಲ, ಜಲ, ಗಾಳಿ, ಹೇಗೆ ನಮಗೆ ಅತ್ಯವಶ್ಯಕವೋ ಹಾಗೆಯೇ ಮಹಾತ್ಮ ಗಾಂಧಿಜೀಯವರ ತತ್ವ ಆದರ್ಶಗಳು ಅಷ್ಟೇ ಮುಖ್ಯ. ಅದೃಷ್ಟ, ಹಣೆ ಬರಹವನ್ನು ನಂಬುವ ಬದಲು ಅವಕಾಶಗಳನ್ನು ಬಳಸಿಕೊಂಡು ಸನ್ನಡತೆಯಲ್ಲಿ ಬದುಕಲು ಕಲಿಯಬೇಕು ಎಂದು ಹೇಳಿದರು.
ಕೃತಿಯನ್ನು ಬಿಡುಗಡೆ ಮಾಡಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ. ಪಿ. ಕೃಷ್ಣ ಮಾತನಾಡಿ, ಗಾಂಧೀಯ ವಿಚಾರಗಳನ್ನು ಪ್ರಚಾರ ಪಡಿಸುವಂತಹ ಕೆಲಸ ಇದಾಗಿದೆ. ಗಾಂಧೀಜಿ ಅವರ ತತ್ವಗಳನ್ನು, ವಿಚಾರಗಳನ್ನು ಅನುಸರಿಸಬೇಕು ಎಂದರು.
ಶ್ರೀ ಹೊಸಮಠ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿತ್ರಕಲಾವಿದ ಎಲ್. ಶಿವಲಿಂಗಪ್ಪ, ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ, ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರೇಶೇಖರ್, ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ವಿ.ಡಿ. ಸುನೀತಾ ರಾಣಿ ಹಾಗೂ ಇತರರು ಇದ್ದರು.